Spread the love

ಕಾರವಾರ: ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಆಗಸ್ಟ್ 26 ರಂದು ಸಂಭವಿಸಿದ ಭೀಕರ ದಿಢೀರ್ ಪ್ರವಾಹದ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯ ನಾಗರಿಕರಿಗೆ ತುರ್ತು ಸೂಚನೆಯೊಂದನ್ನು ಹೊರಡಿಸಿದೆ. ಪ್ರವಾಸ ಅಥವಾ ಇತರೆ ಕಾರಣಗಳಿಗಾಗಿ ಕಾರವಾರ, ಶಿರಸಿ, ಕುಮಟಾ ಸೇರಿದಂತೆ ಜಿಲ್ಲೆಯ ಯಾವುದೇ ಭಾಗದಿಂದ ನೇಪಾಳಕ್ಕೆ ತೆರಳಿರುವವರು ಪ್ರವಾಹದಲ್ಲಿ ಸಿಲುಕಿದ್ದರೆ, ನಾಪತ್ತೆಯಾಗಿದ್ದರೆ ಅಥವಾ ಪ್ರಸ್ತುತ ಸಂಪರ್ಕಕ್ಕೆ ಸಿಗದಿದ್ದರೆ ಕೂಡಲೇ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ತ್ವರಿತ ಕ್ರಮ ಕೈಗೊಳ್ಳಲಾಗಿದ್ದು, ಸಂಪರ್ಕಕ್ಕೆ ಸಿಗದ ವ್ಯಕ್ತಿಗಳ ಕುಟುಂಬಸ್ಥರು ಅಥವಾ ಸ್ನೇಹಿತರು ವಿಳಂಬ ಮಾಡದೆ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕಿದೆ. ಮಾಹಿತಿ ನೀಡುವಾಗ ಸಂಬಂಧಪಟ್ಟ ವ್ಯಕ್ತಿಯ ಹೆಸರು, ವಯಸ್ಸು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಯಾಣದ ವಿವರಗಳು ಹಾಗೂ ಕೊನೆಯದಾಗಿ ಸಂಪರ್ಕವಾದ ದಿನಾಂಕ ಮತ್ತು ಸ್ಥಳದ ಬಗ್ಗೆ ಸ್ಪಷ್ಟ ವಿವರಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಈ ಮಾಹಿತಿಯಿಂದಾಗಿ ನಾಪತ್ತೆಯಾದವರ ಪತ್ತೆ, ಸುರಕ್ಷತೆ ಹಾಗೂ ಅಗತ್ಯವಿರುವ ಸಮನ್ವಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲು ರಕ್ಷಣಾ ಪಡೆಗಳಿಗೆ ಅನುಕೂಲವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಹಿತಿ ನೀಡಲು ಹಾಗೂ ತುರ್ತು ಸಹಾಯಕ್ಕಾಗಿ ಕಾರವಾರದಲ್ಲಿರುವ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ (DEOC) 24×7 ತುರ್ತು ಸಹಾಯವಾಣಿ ಸಂಖ್ಯೆ 08382-229857, ಉಚಿತ ಸಹಾಯವಾಣಿ 1077 ಅಥವಾ ಮೊಬೈಲ್ ಸಂಖ್ಯೆ 9483511015 ಅನ್ನು ಸಂಪರ್ಕಿಸಬಹುದಾಗಿದೆ. ಹಾಗೆಯೇ, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ತುರ್ತು ಸಹಾಯವಾಣಿ ಸಂಖ್ಯೆ 080-22253707 ಹಾಗೂ ಇಮೇಲ್ seockarnataka@gmail.com ಮೂಲಕವೂ ವಿವರಗಳನ್ನು ಹಂಚಿಕೊಳ್ಳಬಹುದು. ಇದರ ಜೊತೆಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ನೇರವಾಗಿ ಸಂಪರ್ಕಿಸಲು +977 9851316807, +977 9709107500, ಹಾಗೂ +977 9810326117 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *