Spread the love

ಕಾರವಾರ: ​ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶಿಷ್ಟ ಘಟನೆಯೊಂದು ಜರುಗಿದೆ. ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಪರೇಡ್ ಪರಿವೀಕ್ಷಣೆ ಮಾಡಿದ ಬಳಿಕ ಸಚಿವ ಲಕ್ಷ್ಮಣ ಸವದಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದರು.

ನೆರೆದಿದ್ದ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಬಳಿಕ ಸಿದ್ಧಪಡಿಸಲಾಗಿದ್ದ ಭಾಷಣದ ಪ್ರತಿಯನ್ನು ಓದಲು ಮುಂದಾದಾಗ, ವೇದಿಕೆಯ ಮೇಲಿದ್ದ ಕತ್ತಲಿನಿಂದಾಗಿ ಅವರಿಗೆ ಅಕ್ಷರಗಳು ಸ್ಪಷ್ಟವಾಗಿ ಕಾಣಿಸಲಿಲ್ಲ. ಮಳೆಯ ಮುನ್ನೆಚ್ಚರಿಕಾ ಕ್ರಮವಾಗಿ ವೇದಿಕೆಗೆ ಸಂಪೂರ್ಣವಾಗಿ ಪೆಂಡಾಲ್ ಅಳವಡಿಸಿದ್ದೇ ಈ ಬೆಳಕಿನ ಕೊರತೆಗೆ ಪ್ರಮುಖ ಕಾರಣವಾಗಿತ್ತು.

​ಬೆಳಕಿನ ಅಭಾವದಿಂದಾಗಿ ಭಾಷಣ ಓದಲು ಪರದಾಡಿದ ಸಚಿವರು, ವೇದಿಕೆಯ ಮೇಲಿಂದಲೇ “ತಕ್ಷಣ ಲೈಟ್ ವ್ಯವಸ್ಥೆ ಮಾಡಿ, ಏನೂ ಕಾಣಿಸುತ್ತಿಲ್ಲ” ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಕ್ಷಣವೇ ಬೇರೆ ದಾರಿ ಕಾಣದೆ ತಾವೇ ಖುದ್ದಾಗಿ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಭಾಷಣ ಮುಂದುವರಿಸಿದರು.

ಸಚಿವರ ಈ ನಡೆಯಿಂದ ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ವೇದಿಕೆಯಲ್ಲಿದ್ದ ಪೋಡಿಯಂ ಅನ್ನು ಧ್ವಜ ಸ್ತಂಭದ ಸಮೀಪ ಕೊಂಚ ಹಿಂದಕ್ಕೆ ಬೆಳಕಿದ್ದ ಜಾಗಕ್ಕೆ ಸ್ಥಳಾಂತರಿಸಿದರು. ಬಳಿಕ ಸಚಿವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಭಾಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

Leave a Reply

Your email address will not be published. Required fields are marked *