Spread the love

​ಕಾರವಾರ: ​ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಸ್ಮರಣೆಯನ್ನು ಶಾಶ್ವತವಾಗಿಸಲು ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ಕಾಲೇಜಿಗೆ (Karwar Medical College) ರಾಮಕೃಷ್ಣ ಹೆಗಡೆ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಉದ್ಘಾಟನೆಗೊಂಡ ರಾಮಕೃಷ್ಣ ಹೆಗಡೆಯವರ ಜನ್ಮಶತಾಬ್ದಿ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರಿಮ್ಸ್ ಸೇರಿದಂತೆ, ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೂ ಹೆಗಡೆಯವರ ಹೆಸರಿಡಲಾಗುವುದು ಎಂದು ಅವರು ತಿಳಿಸಿದರು.

​ಅತ್ಯುತ್ತಮ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಪ್ರಶಸ್ತಿ’

​ಗ್ರಾಮೀಣಾಡಳಿತಕ್ಕೆ ಹೆಗಡೆಯವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದ ಸಿಎಂ, ಪ್ರತಿ ವರ್ಷ ಹೆಗಡೆಯವರ ಜನ್ಮದಿನದಂದು ಅತ್ಯುತ್ತಮ ಸಾಧನೆ ಮಾಡಿದ ಪಂಚಾಯಿತಿಗೆ ‘ರಾಮಕೃಷ್ಣ ಹೆಗಡೆ ಅತ್ಯುತ್ತಮ ಪಂಚಾಯಿತಿ ಪ್ರಶಸ್ತಿ’ ನೀಡುವ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದರು. ಕರ್ನಾಟಕದಲ್ಲಿ ಅವರು ಜಾರಿಗೆ ತಂದ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಗಗಳು ಇಡೀ ದೇಶಕ್ಕೆ ಮಾದರಿಯಾದವು ಹಾಗೂ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳಿಗೆ ಪ್ರೇರಣೆಯಾದವು ಎಂದು ಅವರು ನೆನಪಿಸಿಕೊಂಡರು.

ನಾಯಕರನ್ನು ಬೆಳೆಸಿದ ನಾಯಕ; ಮೌಲ್ಯಾಧಾರಿತ ರಾಜಕಾರಣ

​”ರಾಮಕೃಷ್ಣ ಹೆಗಡೆ ಕೇವಲ ಅಧಿಕಾರ ನಡೆಸಿದ ನಾಯಕರಲ್ಲ, ಅವರು ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಹೊಸ ನಾಯಕತ್ವವನ್ನು ಕಟ್ಟಿದವರು. ನಾಯಕನ ಕೆಲಸ ಕೇವಲ ಅನುಯಾಯಿಗಳನ್ನು ಸೃಷ್ಟಿಸುವುದಲ್ಲ, ಬದಲಾಗಿ ಮತ್ತಷ್ಟು ನಾಯಕರನ್ನು ಬೆಳೆಸುವುದು. ಇದೇ ಹೆಗಡೆಯವರ ಮೂಲ ಮಂತ್ರವಾಗಿತ್ತು,” ಎಂದು ಡಿ.ಕೆ. ಶಿವಕುಮಾರ್ ಬಣ್ಣಿಸಿದರು.

ಹೆಗಡೆಯವರ ರಾಜಕೀಯ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಬಿ.ಎಲ್. ಶಂಕರ್ ಮುಂತಾದ ನಾಯಕರು ಇಂದು ವಿವಿಧ ಪಕ್ಷಗಳಲ್ಲಿದ್ದಾರೆ. ಅವರು ಜಾತಿ ಆಧಾರಿತ ರಾಜಕಾರಣಕ್ಕೆ ಸೀಮಿತರಾಗದೆ ಮೌಲ್ಯಾಧಾರಿತ ರಾಜಕಾರಣ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು ಎಂದು ಹೇಳಿದರು.

ಶಿಕ್ಷಣಕ್ಕೆ ಮುಕ್ತ ಅವಕಾಶ ಹಾಗೂ ಪ್ರಧಾನಿಯಾಗುವ ಅರ್ಹತೆ

​ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಹೆಗಡೆಯವರ ನೀತಿಗಳು ಭದ್ರ ಬುನಾದಿ ಹಾಕಿದವು. ಇಂದು ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಿಂದಾಗಿ ಪ್ರತಿ ವರ್ಷ 13,940 ವೈದ್ಯರು ಹಾಗೂ 1.25 ಲಕ್ಷಕ್ಕೂ ಹೆಚ್ಚು ಎಂಜಿನಿಯರ್‌ಗಳು ಹೊರಹೊಮ್ಮುತ್ತಿದ್ದಾರೆ.

“ಅವರಿಗೆ ದೇಶದ ಪ್ರಧಾನಮಂತ್ರಿಯಾಗುವ ಅರ್ಹತೆ ಮತ್ತು ಅವಕಾಶಗಳೆರಡೂ ಇದ್ದವು, ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ,” ಎಂದ ಸಿಎಂ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ ಮಾತನ್ನು ಉಲ್ಲೇಖಿಸಿ, ಹೆಗಡೆಯವರಲ್ಲಿ ಶ್ರೀರಾಮನ ಆದರ್ಶ ಹಾಗೂ ಶ್ರೀಕೃಷ್ಣನ ಮುತ್ಸದ್ದಿತನ ಎರಡೂ ಇತ್ತು ಎಂದು ಸ್ಮರಿಸಿದರು. ನಮ್ಮ ಸರ್ಕಾರವು ಹೆಗಡೆಯವರ ತತ್ವಗಳು ಹಾಗೂ ಪಂಚಾಯತ್ ರಾಜ್ ದೃಷ್ಟಿಕೋನವನ್ನು ಮುಂದಕ್ಕೂ ಕೊಂಡೊಯ್ಯಲಿದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *