Spread the love

ಭಟ್ಕಳ: ಭಟ್ಕಳದಲ್ಲಿ ಅಕ್ರಮ ಗಾಂಜಾ ಮಾರಾಟ ಜಾಲವನ್ನು ಭೇದಿಸುವಲ್ಲಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಸ್ಕೂಟಿಯಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಓರ್ವನನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಭಟ್ಕಳದ ಬೆಂಡೆಖಾನ್‌ನ ಮೂಸಾನಗರ, ಸಾಯಿಮ್ ಮಂಜಿಲ್ ನಿವಾಸಿ ಮೊಹಮ್ಮದ್ ಸಾಯಿಮ್ ಮೊಹಮ್ಮದ ಸಲೀಂ ಖಾಜಿಯಾ (31) ಎಂದು ಗುರುತಿಸಲಾಗಿದೆ.

ಶುಕ್ರವಾರ(ಅ.02) ಸಂಜೆ 6:30ರ ಸುಮಾರಿಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬಳೆ ಗ್ರಾಮದ ಫಿರ್ದೋಸ್ ನಗರದ ಕೋಳಿ ಫಾರ್ಮ್ ಬಳಿ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಬರ್ಗಮನ್ ಸ್ಕೂಟಿಯಲ್ಲಿ (KA-19 HL-1941) ಗಾಂಜಾ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಪಂಚರ ಸಮೇತ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಅಂದಾಜು 81,600 ರೂ. ಮೌಲ್ಯದ 816 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿಯನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಮೊಹಮ್ಮದ್ ಸಾಯಿಮ್ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯ ಕಲಂ 8(ಸಿ), 20(ಬಿ)2(ಎ) ಅಡಿಯಲ್ಲಿ (ಅಪರಾಧ ಕ್ರಮಾಂಕ: 227/2026) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತನನ್ನು ದಸ್ತಗಿರಿ ನಿಯಮಗಳ ಪ್ರಕಾರ ಸೂಕ್ತ ರಿಮಾಂಡ್‌ನೊಂದಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ದೀಪನ್ ಎಂ.ಎನ್ (IPS), ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಜಿ ಹಾಗೂ ಭಟ್ಕಳ ಉಪವಿಭಾಗದ ಎಎಸ್ಪಿ ರಾನು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ್ ಮೂರ್ನಾಳ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿತ್ತು. 

ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಮಲ್ಲಿಕಾರ್ಜುನ್ ಕೊರಾಣಿ, ಭರ್ಮಪ್ಪ ಬೆಳಗಲಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ಮಂಜುನಾಥ ಖಾರ್ವಿ, ಈರಣ್ಣ ಪೂಜಾರಿ, ಬಾಗಪ್ಪ ಕಡಕಲ್, ನಿಂಗನಗೌಡ ಪಾಟೀಲ್, ಅಂಬರೀಷ್ ಕುಂಬಾರಿ, ವಿನಯ ಮನ್ಸೂನ್ಯರ, ಸಂತೋಷ ಹಡಪದ ಮತ್ತು ಚಾಲಕ ಸಂತೋಷ ನಾಯ್ಕ ಪಾಲ್ಗೊಂಡಿದ್ದರು. ಮಾದಕ ವಸ್ತು ದಂಧೆಯ ವಿರುದ್ಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಈ ತಂಡವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *