Spread the love

ಕಾರವಾರ: ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿಗಾಗಿ ‘ಅಹಿಂದ’ ಪಡೆ ಭರ್ಜರಿ ಪ್ರಚಾರದ ರಣತಂತ್ರ ರೂಪಿಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ, ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಚಾರ ಚುರುಕುಗೊಂಡಿದೆ. ಕೆಪಿಸಿಸಿ ಶಿಕ್ಷಕರು ಮತ್ತು ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಡಾ. ಆರ್.ಎಂ.ಕುಬೇರಪ್ಪ ಅವರ ನೇತೃತ್ವದಲ್ಲಿ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿರುಸಿನ ಮನೆ-ಮನೆ ಮತಯಾಚನೆ ನಡೆಯುತ್ತಿದೆ.

ಶಿಕ್ಷಣ ಸಂಸ್ಥೆಗಳು ಹಾಗೂ ಬ್ಯಾಂಕಿಂಗ್ ವಲಯಗಳ ಬೆಂಬಲಿಗರನ್ನು ಭೇಟಿಯಾಗಿ ಪ್ರಚಾರ ನಡೆಸುತ್ತಿರುವ ಡಾ. ಕುಬೇರಪ್ಪ, “ಮೋಹನ ಲಿಂಬಿಕಾಯಿ ಅವರು ಈ ಹಿಂದೆ ಪರಿಷತ್ ಸದಸ್ಯರಾಗಿ ಪದವೀಧರರು, ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗಾಗಿ ಪ್ರಾಮಾಣಿಕವಾಗಿ ಹೋರಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಈ ಸಂದರ್ಭದಲ್ಲಿ ಅವರನ್ನು ಗೆಲ್ಲಿಸಿದರೆ, ಅತಿಥಿ ಉಪನ್ಯಾಸಕರ ಖಾಯಮಾತಿ ಸೇರಿದಂತೆ ಪದವೀಧರರ ಎಲ್ಲಾ ಬೇಡಿಕೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಹೀಗಾಗಿ ಎಲ್ಲಾ ಅಹಿಂದ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಪದವೀಧರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ಲಿಂಬಿಕಾಯಿ ಅವರಿಗೆ ನೀಡಿ ಬೆಂಬಲಿಸಬೇಕು” ಎಂದು ಮನವಿ ಮಾಡಿದ್ದಾರೆ.

ಈ ಪ್ರಚಾರ ಕಾರ್ಯದಲ್ಲಿ ಕ್ಷೇತ್ರದಾದ್ಯಂತ ನೂರಾರು ಅಹಿಂದ ಕಾರ್ಯಕರ್ತರು, ಅತಿಥಿ ಉಪನ್ಯಾಸಕರು ಹಾಗೂ ಪದವೀಧರರು ಅತ್ಯಂತ ಉತ್ಸಾಹದಿಂದ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದು ಡಾ. ಆರ್.ಎಂ. ಕುಬೇರಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *