Spread the love

ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆಯನ್ನು ಭೀಕರವಾಗಿ ಹ*ತ್ಯೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ಆಲಳ್ಳಿ ಗ್ರಾಮದ ಕಮಲವ್ವ ತಿರುಕಪ್ಪ ಆಡೂರ (75) ಕೊ*ಲೆಯಾದ ದುರ್ದೈವಿ. ದುಷ್ಕರ್ಮಿಗಳು ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.70 ಲಕ್ಷ ರೂ. ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಒಂಟಿಯಾಗಿದ್ದಿದ್ದರಿಂದಲೇ ಟಾರ್ಗೆಟ್: 

ಮೃ*ತ ಕಮಲವ್ವ ಅವರಿಗೆ ಐವರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವೃದ್ಧೆಯ ಮನೆಯ ಸಮೀಪದಲ್ಲೇ ಮಗನ ಮನೆಯಿದ್ದರೂ, ಘಟನೆ ನಡೆದ ದಿನ ಮಗ ಮತ್ತು ಸೊಸೆ ಊರಿಗೆ ತೆರಳಿದ್ದರು ಎನ್ನಲಾಗಿದೆ. ಮತ್ತೊಬ್ಬ ಮಗ ಚಿತ್ರದುರ್ಗದಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮನೆಯಲ್ಲಿ ವೃದ್ಧೆ ಒಂಟಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು, ರಾತ್ರಿ ವೇಳೆ ಮನೆಗೆ ನುಗ್ಗಿ ಈ ಭೀಕರ ಕೃತ್ಯ ಎಸಗಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರ ಪರಿಶೀಲನೆ: 

ಘಟನಾ ಸ್ಥಳಕ್ಕೆ ಮುಂಡಗೋಡ ವೃತ್ತ ನಿರೀಕ್ಷಕ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಧ್ಯಾಹ್ನ ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ಮಹಜರು ಮಾಡಲಾಗಿದ್ದು, ಶ್ವಾನವು ಮನೆಯ ಸುತ್ತಮುತ್ತ ಹಾಗೂ ಹಿಂಭಾಗದ ಓಣಿಯಲ್ಲಿ ಸುತ್ತಾಡಿ ಮರಳಿದೆ.

ಘಟನೆಯಿಂದಾಗಿ ಗ್ರಾಮದಲ್ಲಿ ಒಂಟಿ ವೃದ್ಧೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *