Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆಗೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಕಣ್ಣಿನ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಕಾರವಾರದಲ್ಲಿ ‘ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ’ಯ ನೂತನ ಕೇಂದ್ರವು ನವೆಂಬರ್ 6ರ ಶುಕ್ರವಾರದಂದು ಅದ್ಧೂರಿಯಾಗಿ ಶುಭಾರಂಭಗೊಳ್ಳಲಿದೆ. 

ನೇತ್ರ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನೇತ್ರಾಲಯ ಗ್ರೂಪ್‌ನ ಸಂಸ್ಥಾಪಕ ಹಾಗೂ ರಾಜ್ಯ ಸರ್ಕಾರದ ವಿಷನ್ ಕಮಿಟಿ ಅಧ್ಯಕ್ಷ ಡಾ. ಕೃಷ್ಣ ಪ್ರಸಾದ್ ಕುಡ್ಲು ಅವರು ಕಾರವಾರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 

ಉಡುಪಿ, ಮಂಗಳೂರು, ಶಿವಮೊಗ್ಗ, ಕಾಸರಗೋಡು, ಗೋವಾ, ಭಟ್ಕಳ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಕಾರ್ಯಾಚರಿಸುತ್ತಿರುವ ಈ ಪ್ರತಿಷ್ಠಿತ ಆಸ್ಪತ್ರೆ ಇದೀಗ ಕಾರವಾರದ ಜನರಿಗೂ ಸೇವೆ ನೀಡಲು ಸಜ್ಜಾಗಿದೆ.

ನವೆಂಬರ್ 6ರ ಮಧ್ಯಾಹ್ನ 12.05ಕ್ಕೆ ಕಾರವಾರ ನಗರದ ಡಾ. ಪಿಕಳೆ ರಸ್ತೆಯಲ್ಲಿರುವ ಹಳೆಯ ಕೊಂಕಣ ಮೆಡಿಕಲ್ ಸೆಂಟರ್ ಕಟ್ಟಡದಲ್ಲಿ ಈ ನೂತನ ಕೇಂದ್ರದ ಉದ್ಘಾಟನಾ ಸಮಾರಂಭ ಜರುಗಲಿದೆ. ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಪರಮ ಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಪ್ರಜ್ವಲನೆ ಮಾಡುವ ಮೂಲಕ ಆಸ್ಪತ್ರೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. 

ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಶ್ರೀಪಾದ ಎಸ್. ನಾಯಕ್, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಭಾಗವಹಿಸಲಿದ್ದಾರೆ.

ಕಣ್ಣಿನ ಎಲ್ಲಾ ತೊಂದರೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಸದುದ್ದೇಶದಿಂದ ಸ್ಥಾಪಿತಗೊಳ್ಳುತ್ತಿರುವ ಈ ಆಸ್ಪತ್ರೆಯಲ್ಲಿ, ಅಂತರರಾಷ್ಟ್ರೀಯ ಗುಣಮಟ್ಟದ ರೋಗ ಪತ್ತೆಹಚ್ಚುವಿಕೆ ಉಪಕರಣಗಳ ನೆರವಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಕಣ್ಣಿನ ಪೊರೆ, ಮಧುಮೇಹ ಕಣ್ಣಿನ ತೊಂದರೆ, ಮಕ್ಕಳ ನೇತ್ರ ಚಿಕಿತ್ಸೆ, ಮಳೆಗಣ್ಣು, ಗ್ಲಾಕೊಮಾ ಸೇರಿದಂತೆ ಅತ್ಯಾಧುನಿಕ ಚಿಕಿತ್ಸೆಗಳು ಇಲ್ಲಿ ದೊರೆಯಲಿವೆ. 

ಇದಲ್ಲದೆ ಆಂಬ್ಲಿಯೋಪಿಯ ಥೆರಪಿ, ಡ್ರೈ ಐ ಕ್ಲಿನಿಕ್ ಹಾಗೂ ಮಕ್ಕಳಿಗೆ ಅಗತ್ಯವಿರುವ ಮಯೋಪಿಯ ಕ್ಲಿನಿಕ್‌ನಂತಹ ವಿಶೇಷ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸಲಿವೆ. ನೇತ್ರ ತಜ್ಞ ಹಾಗೂ ವೈದ್ಯಕೀಯ ನಿರ್ದೇಶಕ ಡಾ. ನಿರಂಜನ್ ಆರ್, ಡಾ. ಮೇಘಾ ಎಂ. ದಿವಾಕರ್ ಮತ್ತು ಡಾ. ಶರತ್ ಎಸ್. ಹೆಗ್ಡೆ ಅವರು ರೋಗಿಗಳಿಗೆ ತಜ್ಞ ಸೇವೆ ಒದಗಿಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್ ಹಾಗೂ ಎಸ್.ವಿ. ಸಂಕನೂರು, ನ್ಯೂ ನರ್ಸಿಂಗ್ ಹೋಂ ಮಾಲೀಕ ಡಾ. ಎಸ್.ಆರ್. ನಾಯಕ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಜಯ್ ದೊಡ್ಡಮನಿ ಅವರು ಉಪಸ್ಥಿತರಿರಲಿದ್ದಾರೆ. ವಿಶೇಷ ಚಿಕಿತ್ಸಾ ಸಂದರ್ಶಕ ವೈದ್ಯರು ಸಹ ನಿಗದಿತ ದಿನಗಳಂದು ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಡಾ. ನಿರಂಜನ್ ಆರ್. ಹಾಗೂ ಡಾ. ಮೇಘಾ ಎಂ. ದಿವಾಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *