Spread the love

ಕಾರವಾರ: ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಸೇವನೆ ಹಾಗೂ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನಧಿಕೃತವಾಗಿ ಸ್ಥಳಾವಕಾಶ ಮಾಡಿಕೊಟ್ಟಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತ್ಯೇಕವಾಗಿ ನಡೆದ ಎರಡು ದಾಳಿಗಳಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 15(A) ಮತ್ತು 32 (3) ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಮಂಗಳವಾರ(ನ.03) ರಂದು ಸಂಜೆ 06-45 ಗಂಟೆ ಸುಮಾರಿಗೆ ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದ ಕಂತ್ರಿವಾಡಾ ರಸ್ತೆಯ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ಆರೋಪದ ಮೇಲೆ ಹರಿಜನಕೇರಿ ನಿವಾಸಿ ಜಗದೀಶ ಸುರೇಶ ಆಗೇರ (35) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ನಿರೀಕ್ಷಕ ಖಾನ್ ಅವರ ನೇತೃತ್ವದಲ್ಲಿ ನಡೆದ ದಾಳಿಯ ವೇಳೆ, 180 ML ಸಾಮರ್ಥ್ಯದ ವಿಸ್ಕಿ ಖಾಲಿ ಬಾಟಲಿ, 90 ML ವಿಸ್ಕಿ ಪೌಚ್, ಪ್ಲಾಸ್ಟಿಕ್ ಗ್ಲಾಸ್ ಹಾಗೂ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ದಿನ ಸಂಜೆ 07-15 ಗಂಟೆ ಸುಮಾರಿಗೆ ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಮತ್ತೊಂದು ದಾಳಿ ನಡೆಸಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ತಮ್ಮ ಮನೆಯ ಪಕ್ಕದ ಶೆಡ್‌ನಲ್ಲಿ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದ ಆರೋಪದ ಮೇಲೆ 66 ವರ್ಷದ ಪ್ರದೀಪ ಬಾಬನಿ ಬಾಂದೇಕರ ಎಂಬುವವರ ಮೇಲೆ ಕೇಸ್ ದಾಖಲಾಗಿದೆ. ಪೊಲೀಸ್ ನಿರೀಕ್ಷಕ ಯು.ಹೆಚ್. ಸಾತೇನಹಳ್ಳಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ಬ್ರ್ಯಾಂಡ್‌ಗಳ 750 ML ನ ಅರ್ಧ ಖಾಲಿಯಾದ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಗ್ಲಾಸ್‌ಗಳು ಹಾಗೂ ನೀರಿನ ಬಾಟಲಿಯನ್ನು ಜಪ್ತಿ ಮಾಡಲಾಗಿದೆ.

ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *