ಹಳಿಯಾಳ: ಅಕ್ರಮವಾಗಿ ಗಾಂಜಾ (ಮಾದಕ ವಸ್ತು) ಮಾರಾಟ ಮಾಡಲು ಯತ್ನಿಸುತ್ತಿದ್ದ 20 ವರ್ಷದ ಯುವಕನೊಬ್ಬನನ್ನು ಹಳಿಯಾಳ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಸಾವಿರಾರು ರೂಪಾಯಿ ಮೌಲ್ಯದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಹಳಿಯಾಳದ ಸಿದ್ದರಾಮೇಶ್ವರ ಗಲ್ಲಿಯ (ಸ್ಲಂ ಏರಿಯಾ) ನಿವಾಸಿ ಸುದೀಪ್ ದಶರಥ ಬೋವಿವಡ್ಡರ (20) ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಘಟನೆಯ ವಿವರ: ಶುಕ್ರವಾರ (ನವೆಂಬರ್ 13) ಸಂಜೆ 4:30ರ ಸುಮಾರಿಗೆ ಹಳಿಯಾಳ ಶಹರದ ದೇಶಪಾಂಡೆ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ‘ಪ್ರೆಸ್ಟೀಜ್ ಬುಕ್ ಹೌಸ್’ ಮುಂದಿನ ರಸ್ತೆಯಲ್ಲಿ ಆರೋಪಿಯು ತನ್ನ ಅಕ್ರಮ ಲಾಭಕ್ಕಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಗ್ರಾಹಕರಿಗಾಗಿ ಕಾಯುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ (ಕಾನೂನು ಮತ್ತು ಸುವ್ಯವಸ್ಥೆ) ಕಿರಣ್ ಪಾಟೀಲ್ ನೇತೃತ್ವದ ಪೊಲೀಸ್ ತಂಡವು ಸ್ಥಳದ ಮೇಲೆ ದಿಢೀರ್ ದಾಳಿ ನಡೆಸಿದೆ.
ದಾಳಿಯ ವೇಳೆ ಆರೋಪಿ ಸುದೀಪ್ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಬಿಳಿ ಬಣ್ಣದ ಪ್ಲಾಸ್ಟಿಕ್ ಕವರ್ ಹಾಗೂ ನ್ಯೂಸ್ ಪೇಪರ್ನಲ್ಲಿ ಸುತ್ತಿಡಲಾಗಿದ್ದ ಸುಮಾರು 6,500 ರೂ. ಮೌಲ್ಯದ 128 ಗ್ರಾಂ ಒಣ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಆರೋಪಿ ಸುದೀಪ್ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ-1985ರ (N.D.P.S. Act) ಕಲಂ 8(c) ಹಾಗೂ 20(b)(ii)(A) ಅಡಿಯಲ್ಲಿ ಪ್ರಕರಣ (ಮೊ.ನಂ: 312/2026) ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
