ಹಳಿಯಾಳ: ಮಾಧ್ಯಮಗಳ ನಿರಂತರ ವರದಿ ಹಾಗೂ ಬಿಜೆಪಿ ಪಕ್ಷದ ಹೋರಾಟದ ಒತ್ತಡಕ್ಕೆ ಮಣಿದ ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ, ಕಬ್ಬಿನ ಪ್ರತಿ ಟನ್ಗೆ 200 ಹೆಚ್ಚುವರಿ ದರ ನೀಡಲು ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ. ಈ ಮೂಲಕ ಈ ಹಿಂದೆ ಘೋಷಿಸಿದ್ದ 3,600 ರೂ.ಗೆ ನಿಗದಿಯಾಗಿದ್ದ ದರವನ್ನು 3,800 ರೂ.ಗೆ ಹೆಚ್ಚಿಸಿ ಕಾರ್ಖಾನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಇತ್ತೀಚೆಗೆ ಪಟ್ಟಣದ ವಿವಿಐಪಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ರೈತ ಮುಖಂಡರು ಹಾಗೂ ಕಾರ್ಖಾನೆ ಪ್ರತಿನಿಧಿಗಳ ನಡುವೆ ನಡೆದ ಸಭೆಯ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯನ್ನು ಖಂಡಿಸಿ ಮಾಧ್ಯಮಗಳು ನಿರಂತರವಾಗಿ ವರದಿ ಪ್ರಕಟಿಸಿದ್ದವು. ಇದರ ಬೆನ್ನಲ್ಲೇ ಕಬ್ಬಿನ ದರ ತೃಪ್ತಿಕರವಾಗಿಲ್ಲ ಎಂದು ರೈತ ಸಮುದಾಯವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿತ್ತು.
ಇದರೊಂದಿಗೆ ಮಾಜಿ ಶಾಸಕ ಸುನಿಲ್ ಹೆಗಡೆ ಅವರ ನೇತೃತ್ವದಲ್ಲಿ ಬಿಜೆಪಿ ಹಳಿಯಾಳ ಮಂಡಲವು ಮನವಿ ಸಲ್ಲಿಕೆ, ಪತ್ರಿಕಾಗೋಷ್ಠಿ ಸೇರಿದಂತೆ ವಿವಿಧ ಹಂತಗಳಲ್ಲಿ ಕಾರ್ಖಾನೆ ಆಡಳಿತ ಮಂಡಳಿಯ ಮೇಲೆ ದರ ಹೆಚ್ಚಳಕ್ಕೆ ಒತ್ತಡ ಹೇರಿತ್ತು. ಮಾಧ್ಯಮಗಳ ನಿರಂತರ ವರದಿ, ರೈತರ ಆಕ್ರೋಶ ಹಾಗೂ ಬಿಜೆಪಿ ಪಕ್ಷದ ಹೋರಾಟದ ಪರಿಣಾಮವಾಗಿ ಶನಿವಾರ ಸಂಜೆ ಕಾರ್ಖಾನೆ ಆಡಳಿತ ಮಂಡಳಿ ಸುದೀರ್ಘ ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ 3,600ರ ಬದಲಾಗಿ 3,800 ಪಾವತಿಸುವುದಾಗಿ ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಿ ದರ ಹೆಚ್ಚಳಕ್ಕೆ ನಿರಂತರವಾಗಿ ಧ್ವನಿ ಎತ್ತಿದ ಮಾಧ್ಯಮಗಳು ಹಾಗೂ ಬಿಜೆಪಿ ಮುಖಂಡರ ಪ್ರಯತ್ನಕ್ಕೆ ಕಬ್ಬು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.
“ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರತಿ ಟನ್ ಕಬ್ಬಿಗೆ 200 ಹೆಚ್ಚುವರಿ ದರ ಘೋಷಿಸಿರುವುದು ಸ್ವಾಗತಾರ್ಹ. ಮಾಧ್ಯಮಗಳ ನಿರಂತರ ಪ್ರಯತ್ನ ಹಾಗೂ ಬಿಜೆಪಿ ಪಕ್ಷದ ಹೋರಾಟಕ್ಕೆ ಸಂದ ಜಯ ಇದಾಗಿದೆ. ಹಳಿಯಾಳ ಕ್ಷೇತ್ರದ ಕಬ್ಬಿನ ಇಳುವರಿ ಪ್ರಮಾಣ ಶೇ.12.19ರಷ್ಟಿದ್ದು, ಈ ಲೆಕ್ಕಾಚಾರದ ಪ್ರಕಾರ ರೈತರಿಗೆ ಇನ್ನೂ ಹೆಚ್ಚಿನ ದರ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ರೈತರಿಗೆ ಉತ್ತಮ ದರ ದೊರೆಯಬೇಕು ಎನ್ನುವುದೇ ನಮ್ಮ ಸದಿಚ್ಛೆ.”
— ಸುನಿಲ್ ಹೆಗಡೆ, ಮಾಜಿ ಶಾಸಕ, ಹಳಿಯಾಳ
