Spread the love

ಕಾರವಾರ: ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ರಕ್ಷಿಸಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಸಕಾಲದಲ್ಲಿ ಸ್ಪಂದಿಸಿ ಅಮೂಲ್ಯ ಜೀವವೊಂದನ್ನು ಉಳಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆಯ ವಿವರ: ಮಲ್ಲಾಪುರ ಪೊಲೀಸ್ ಠಾಣೆಯ ಸಿ.ಹೆಚ್.ಸಿ. (CHC) ಸಾಯಿನಂದ ವಿ. ನಾಯ್ಕ ಅವರು 112-ಇ.ಆರ್.ಎಸ್.ಎಸ್. ಕರ್ತವ್ಯದ ನಿಮಿತ್ತ ಸೋಮವಾರ ಬೆಳಿಗ್ಗೆ 8:25ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮಲ್ಲಾಪುರದಿಂದ ಕಾರವಾರಕ್ಕೆ ಬರುತ್ತಿದ್ದರು. ಈ ವೇಳೆ ಕಾರವಾರದ ಕೋಡಿಬಾಗ್ ಸೇತುವೆಯ ಮೇಲೆ ಮಹಿಳೆಯೊಬ್ಬರು ನೀರಿಗೆ ಹಾರಿ ಆತ್ಮಹ*ತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ. ಕ್ಷಣಾರ್ಧದಲ್ಲೇ ವಾಹನ ನಿಲ್ಲಿಸಿ ಸ್ಥಳಕ್ಕೆ ದೌಡಾಯಿಸಿದ ಅವರು, ಸಾರ್ವಜನಿಕರ ನೆರವಿನಿಂದ ಮಹಿಳೆಯನ್ನು ಹಿಡಿದು ಸುರಕ್ಷಿತವಾಗಿ ಸೇತುವೆಯಿಂದ ಕೆಳಗಿಳಿಸಿದ್ದಾರೆ. ಬಳಿಕ ಆಕೆಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ.

ಆಸ್ಪತ್ರೆಗೆ ದಾಖಲು: ಕೂಡಲೇ ಸ್ಥಳಕ್ಕೆ ಆಗಮಿಸಿದ 112-ಇ.ಆರ್.ಎಸ್.ಎಸ್. ಸಿಬ್ಬಂದಿ ಎ.ಹೆಚ್.ಸಿ. (AHC) ದಿನೇಶ್ ನಾಗೇಕರ ಅವರು ಸೇತುವೆಯ ಮೇಲೆ ಸೇರಿದ್ದ ಜನರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ರಕ್ಷಿಸಲ್ಪಟ್ಟ ಮಹಿಳೆಯನ್ನು 112 ವಾಹನದಲ್ಲೇ ಕಾರವಾರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಆಪ್ತಸಮಾಲೋಚನೆಗಾಗಿ ದಾಖಲಿಸಿದ್ದಾರೆ.

ಮಾನವೀಯ ಕಾಳಜಿ ಮೆರೆದು ಪ್ರಾಣಾಪಾಯದಿಂದ ಮಹಿಳೆಯನ್ನು ಪಾರುಮಾಡಿದ ಸಿ.ಹೆಚ್.ಸಿ. ಸಾಯಿನಂದ ವಿ. ನಾಯ್ಕ ಹಾಗೂ ಅವರಿಗೆ ನೆರವಾದ ದಿನೇಶ್ ನಾಗೇಕರ ಅವರ ಕರ್ತವ್ಯನಿಷ್ಠೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *