ಯಲ್ಲಾಪುರ: ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ವಿರಾಮ ಕಳೆಯಲು ಪ್ರವಾಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಚೆಕ್ ಡ್ಯಾಂನಲ್ಲಿ (Check Dam) ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾ*ವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
ಯಲ್ಲಾಪುರ ಪಟ್ಟಣದ ಶಾರದಾ ಗಲ್ಲಿಯ ನಿವಾಸಿ, ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದ (ಬಂಗಾರದ ಅಂಗಡಿ ಕೆಲಸ) ಸುಬ್ರಾಯ ಶ್ರೀನಿವಾಸ ಶೇಟ್ (54) ಮೃ*ತಪಟ್ಟ ದುರ್ದೈವಿ.
ಘಟನೆಯ ವಿವರ: ಭಾನುವಾರ (ನ.15) ಸುಬ್ರಾಯ ಅವರು ತಮ್ಮ ಕುಟುಂಬದವರು ಹಾಗೂ ಸಂಬಂಧಿಕರ ಜೊತೆ ಸೇರಿ ಒಂದು ದಿನದ ಪ್ರವಾಸಕ್ಕಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಗ್ರಾಮದ ದಬ್ಬಗುಳಿ ಬಳಿ ಇರುವ ಹಳ್ಳದ ಚೆಕ್ ಡ್ಯಾಂಗೆ ತೆರಳಿದ್ದರು. ಮಧ್ಯಾಹ್ನ ಎಲ್ಲರೂ ಒಟ್ಟಿಗೆ ಊಟ ಮುಗಿಸಿದ್ದು, ಬಳಿಕ ಸಂಜೆ 4:30ರ ಸುಮಾರಿಗೆ ಸುಬ್ರಾಯ ಅವರು ಚೆಕ್ ಡ್ಯಾಂನಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ.
ಈ ವೇಳೆ ಆಯತಪ್ಪಿ ನೀರಿನ ಆಳಕ್ಕೆ ಹೋದ ಅವರಿಗೆ ಈಜು ಬಾರದ ಕಾರಣ, ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃ*ತಪಟ್ಟಿದ್ದಾರೆ. ಕಣ್ಣೆದುರೇ ನಡೆದ ಈ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಪ್ರವಾಸದ ಖುಷಿಯಲ್ಲಿದ್ದ ಕುಟುಂಬದಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ.
ತಂದೆಯ ಸಾ*ವಿನಲ್ಲಿ ತಮಗೆ ಯಾವುದೇ ಅನುಮಾನವಿಲ್ಲ ಎಂದು ಮೃ*ತರ ಪುತ್ರ ಅಜೀತ್ ಸುಬ್ರಾಯ ಶೇಟ್ (23) ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್.ಎಸ್ (BNSS) ಕಲಂ 194 (1) ಅಡಿಯಲ್ಲಿ ಯು.ಡಿ.ಆರ್ (ಅಸ್ವಾಭಾವಿಕ ಸಾ*ವು) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡು ಮೃ*ತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
