ಅಂಕೋಲಾ: ಪ್ರವಾಸಕ್ಕೆಂದು ಬಂದಿದ್ದ ಚೆನ್ನೈ ಮೂಲದ ಯುವಕನೊಬ್ಬ ಆಕಸ್ಮಿಕವಾಗಿ ವಿಭೂತಿ ಜಲಪಾತದ 20 ಅಡಿ ಆಳದ ನೀರಿನ ಗುಂಡಿಗೆ ಜಾರಿ ಬಿದ್ದು ಮುಳುಗುತ್ತಿದ್ದ ವೇಳೆ, ಅಲ್ಲಿದ್ದ ಜೀವರಕ್ಷಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಆತನ ಪ್ರಾಣ ಉಳಿಸಿರುವ ಘಟನೆ ಶುಕ್ರವಾರ (ನ.20) ನಡೆದಿದೆ.
ಚೆನ್ನೈ ಮೂಲದ ಗಜಪತಿ (25) ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗ. ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ್ ಅವರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳದಲ್ಲಿದ್ದ ಪ್ರವಾಸಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಘಟನೆಯ ವಿವರ: ಚೆನ್ನೈನಿಂದ ಒಟ್ಟು 9 ಜನರ ಪ್ರವಾಸಿಗರ ತಂಡ ದಾಂಡೇಲಿ ಪ್ರವಾಸ ಮುಗಿಸಿ, ಶುಕ್ರವಾರ ಬೆಳಗ್ಗೆ 11:50ರ ಸುಮಾರಿಗೆ ವಿಭೂತಿ ಜಲಪಾತ ವೀಕ್ಷಣೆಗೆ ಆಗಮಿಸಿತ್ತು. ಜಲಪಾತದ ನೀರಿಗೆ ಇಳಿದಿದ್ದ ಈ ತಂಡ, ಧುಮ್ಮಿಕ್ಕುವ ನೀರಿನ ಸಮೀಪದ ಬಂಡೆಯ ಮೇಲೆ ಕುಳಿತು ಮೋಜು-ಮಸ್ತಿಯಲ್ಲಿ ತೊಡಗಿತ್ತು.
ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿದ ಗಜಪತಿ ನೇರವಾಗಿ 20 ಅಡಿ ಆಳವಿರುವ ನೀರಿನ ಗುಂಡಿಗೆ ಬಿದ್ದಿದ್ದಾರೆ. ಗಜಪತಿಗೆ ಈಜು ಬಾರದಿರುವುದನ್ನು ಗಮನಿಸಿದ ಅವರ ಸ್ನೇಹಿತ ಅಶ್ವತ್ ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ಆದರೆ, ನೀರಿನ ಆಳ ಹೆಚ್ಚಿದ್ದ ಕಾರಣ ಸ್ನೇಹಿತನಿಂದಲೂ ಅವರನ್ನು ರಕ್ಷಿಸುವುದು ಕಷ್ಟವಾಗಿದೆ.
ರೆಸ್ಕ್ಯೂ ಟ್ಯೂಬ್ ಮೂಲಕ ಜೀವ ರಕ್ಷಣೆ:
ಯುವಕ ನೀರಿನಲ್ಲಿ ಮುಳುಗುತ್ತಿರುವುದನ್ನು ತಕ್ಷಣವೇ ಗಮನಿಸಿದ ವಿಭೂತಿ ಜಲಪಾತದ ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ್, ಕ್ಷಣಮಾತ್ರವೂ ತಡಮಾಡದೆ ಸ್ಥಳಕ್ಕೆ ಧಾವಿಸಿದ್ದಾರೆ. ರೆಸ್ಕ್ಯೂ ಟ್ಯೂಬ್ (Rescue Tube) ಸಹಾಯದಿಂದ ನೀರಿಗೆ ಹಾರಿ ಮುಳುಗುತ್ತಿದ್ದ ಗಜಪತಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಜೀವರಕ್ಷಕ ಸಿಬ್ಬಂದಿ ವಿಜಯ ನಾಯಕ್ ಅವರ ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಕಂಡು, ವಿಭೂತಿ ಜಲಪಾತ ವೀಕ್ಷಣೆಗೆ ಬಂದಿದ್ದ ಇತರೆ ಪ್ರವಾಸಿಗರೆಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
