ಭಟ್ಕಳ: ಅಪರಾಧಿಗಳಿಗೆ ಜಾಮೀನು ಕೊಡಿಸುವ ಉದ್ದೇಶದಿಂದ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು (ಆರ್ಟಿಸಿ) ಸಲ್ಲಿಸಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯೊಬ್ಬನನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಮಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿ ನಿವಾಸಿ ಮಹೇಶ್ ಬಿ. ಮೋಹನ್ ನಾಯಕ್ ಬಂಧಿತ ಆರೋಪಿಯಾಗಿದ್ದು, ಈತನನ್ನು ಭಟ್ಕಳದ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳೆದ ಜೂನ್ 30, 2025ರಂದು ಭಟ್ಕಳದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ವ್ಯಾಪ್ತಿಯ ಪ್ರಕರಣವೊಂದರ ಆರೋಪಿಗಳಿಗೆ ಜಾಮೀನು ಕೊಡಿಸಲು ಈತ ಬಂದಿದ್ದನು. ಈ ವೇಳೆ ಜಾಮೀನು ಪ್ರಮಾಣಪತ್ರದ ಜೊತೆಗೆ ಲಗತ್ತಿಸಲಾಗಿದ್ದ ಆಧಾರ್ ಕಾರ್ಡ್ ಹಾಗೂ ಪಹಣಿಯನ್ನು ನ್ಯಾಯಾಲಯದ ‘ಶೂರಿಟಿ ಮ್ಯಾನೇಜ್ಮೆಂಟ್ ಸಿಸ್ಟಮ್’ ಮೂಲಕ ಪರಿಶೀಲಿಸಿದಾಗ ಅವು ಸೃಷ್ಟಿಸಲಾದ ನಕಲಿ ದಾಖಲೆಗಳು ಎಂಬುದು ಸಾಬೀತಾಗಿತ್ತು. ದಾಖಲೆಗಳ ಪರಿಶೀಲನೆ ನಡೆಯುತ್ತಿರುವಾಗಲೇ ವಂಚನೆ ಬಯಲಾಗುವ ಸುಳಿವು ಸಿಕ್ಕ ತಕ್ಷಣ ಆರೋಪಿ ಕೋರ್ಟ್ನಿಂದಲೇ ಪರಾರಿಯಾಗಿದ್ದನು.
ಈ ವಂಚನೆ ಹಾಗೂ ನ್ಯಾಯಾಲಯದ ದಾರಿತಪ್ಪಿಸಿದ ಆರೋಪದ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಕಲಂ: 229, 318(4), 336(3) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದ ಪೊಲೀಸರು, ಇದೀಗ ಏಪ್ರಿಲ್ 15, 2026ರಂದು ಮಂಗಳೂರಿನಲ್ಲಿ ಆತನನ್ನು ಪತ್ತೆಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಠಾಣೆಯ ಪಿಐ ದಿವಾಕರ್ ಪಿ.ಎಂ. ಅವರ ನೇತೃತ್ವದಲ್ಲಿ ಪಿಎಸ್ಐ ನವೀನ್ ಎಸ್. ನಾಯ್ಕ್ ಮತ್ತು ಸಿಬ್ಬಂದಿಗಳಾದ ದಿನೇಶ್ ನಾಯಕ್ ಹಾಗೂ ಮಹಾಂತೇಶ್ ಹಿರೇಮಠ ಅವರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
