ಭಟ್ಕಳ: ಭಟ್ಕಳದಲ್ಲಿ ಕಳ್ಳರ ಹಾವಳಿ ಮುಂದುವರಿದಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಒಂದನ್ನು ದುಷ್ಕರ್ಮಿಗಳು ಕದ್ದೊಯ್ದಿರುವ ಘಟನೆ ವರದಿಯಾಗಿದೆ. ಭಟ್ಕಳದ ಮಣ್ಣುಳಿಯ ರಾಷ್ಟ್ರೀಯ ಹೆದ್ದಾರಿ 66 ಯ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಬಿಳಿ ಬಣ್ಣದ ಟ್ರಾವೆಲರ್ ಮಿನಿ ಬಸ್ ಕಳುವಾಗಿದ್ದು, ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.
ಭಟ್ಕಳ ಮೂಲದ ಅನಂತ ನಾಯ್ಕ ಅವರ ಪುತ್ರ 35 ವರ್ಷದ ಕೃಷ್ಣ ಎಂಬುವವರಿಗೆ ಸೇರಿದ ಬಿಳಿ ಬಣ್ಣದ ಟ್ರಾವೆಲರ್ (ನೋಂದಣಿ ಸಂಖ್ಯೆ KA 47/7838) ಕಳುವಾದ ವಾಹನವಾಗಿದೆ. ಫಿರ್ಯಾದಿ ಕೃಷ್ಣ ಅವರು 27-09-2026 ರಂದು ಬೆಳಿಗ್ಗೆ 11:00 ಗಂಟೆ ಸುಮಾರಿಗೆ ತಮ್ಮ ವಾಹನವನ್ನು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದರು.
ಆದರೆ, 28-09-2026 ರಂದು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ಬಂದು ನೋಡಿದಾಗ ಸ್ಥಳದಲ್ಲಿ ವಾಹನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ವಾಹನವನ್ನು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ಅವರು ಅಂತಿಮವಾಗಿ ಠಾಣೆಯ ಮೆಟ್ಟಿಲೇರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೃಷ್ಣ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಪತ್ತೆಯಾಗಿರುವ ಮಿನಿ ಬಸ್ ಹಾಗೂ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 303(2) ರ ಅಡಿಯಲ್ಲಿ ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ವಾಹನ ಕಳ್ಳರ ಪತ್ತೆಗಾಗಿ ಪೊಲೀಸರು ಹೆದ್ದಾರಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
