ಭಟ್ಕಳ: ತಾಲೂಕಿನ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಭಾರಿ ಕಳ್ಳತನವೊಂದು ನಡೆದಿದ್ದು, ಉಪನ್ಯಾಸಕರೊಬ್ಬರ ಮನೆಯ ಬೀಗ ಒಡೆದ ಖದೀಮರು ಬರೋಬ್ಬರಿ 17.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಭಟ್ಕಳ ತಾಲೂಕಿನ ಕಾಯ್ಕಿಣಿ ಅಗ್ಲೊಳೆಯ ಕೊಟದಮಕ್ಕಿ ರಸ್ತೆ ನಿವಾಸಿ, 54 ವರ್ಷದ ಉಪನ್ಯಾಸಕ ರಾಜೇಶ್ ಕುಪ್ಪಯ್ಯ ಶೆಟ್ಟಿ ಎಂಬುವರ ಮನೆಯಲ್ಲೇ ಈ ಕಳ್ಳತನ ನಡೆದಿದೆ. ಅಕ್ಟೋಬರ್ 1 ರಂದು ಬೆಳಿಗ್ಗೆ 8:45 ರ ಸುಮಾರಿಗೆ ರಾಜೇಶ್ ಹಾಗೂ ಅವರ ಪತ್ನಿ ಇಬ್ಬರೂ ಕೆಲಸದ ನಿಮಿತ್ತ ಕಾಲೇಜಿಗೆ ತೆರಳಿದ್ದರು. ಇದೇ ವೇಳೆ, ಬೆಳಿಗ್ಗೆ 8:45 ರಿಂದ ಮಧ್ಯಾಹ್ನ 11:55 ರ ನಡುವಿನ ಅವಧಿಯಲ್ಲಿ, ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿದ ಕಳ್ಳರು, ಮನೆಯ ಹಿಂಬದಿಯ ಬಾಗಿಲನ್ನು ಗಟ್ಟಿಯಾದ ಆಯುಧದಿಂದ ಮುರಿದು ಒಳನುಗ್ಗಿದ್ದಾರೆ.
ಮನೆಯೊಳಗೆ ಪ್ರವೇಶಿಸಿದ ಖದೀಮರು, ಮಲಗುವ ಕೋಣೆಯಲ್ಲಿದ್ದ ಕಬೋರ್ಡ್ (ಕಪಾಟು) ಬಾಗಿಲನ್ನು ಮುರಿದು, ಅದರಲ್ಲಿದ್ದ ಅಂದಾಜು 13,50,000 ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 1,00,000 ರೂ. ಮೌಲ್ಯದ ಬೆಳ್ಳಿಯ ತಂಬಿಗೆಯನ್ನು ಕದ್ದಿದ್ದಾರೆ. ಅಲ್ಲದೆ, ಮತ್ತೊಂದು ಕಬೋರ್ಡ್‌ನಲ್ಲಿದ್ದ 3,00,000 ರೂಪಾಯಿ ನಗದು ಹಣವನ್ನೂ ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ.
ಕಾಲೇಜಿನಿಂದ ಮರಳಿ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಒಟ್ಟಾರೆ 17.50 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಈ ಕುರಿತು ಉಪನ್ಯಾಸಕ ರಾಜೇಶ್ ಶೆಟ್ಟಿ ಅವರು ನೀಡಿದ ದೂರಿನ ಮೇರೆಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 305, 331(3) ಅಡಿಯಲ್ಲಿ (ಅಪರಾಧ ಕ್ರಮಾಂಕ 124/2026) ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
