Spread the love

​​ಕಾರವಾರ: ನಗರದ ಗ್ರೀನ್ ಸ್ಟ್ರೀಟ್ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದ ಬಳಿಯ ‘ತಾಜ್ ಫಾಸ್ಟ್ ಫುಡ್ ಸೆಂಟರ್’ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಆಘಾತಕಾರಿ ಘಟನೆ ನಡೆದಿದೆ. ಗಣೇಶ್ ಎಂಬುವರಿಗೆ ಸೇರಿದ ಈ ಫಾಸ್ಟ್ ಫುಡ್ ಸೆಂಟರ್‌ನ ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ ಈ ಅವಘಡ ಸಂಭವಿಸಿದೆ.

ಸಿಲಿಂಡರ್ ಪೈಪ್ ಜೋಡಿಸುವ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಇಡೀ ಅಡುಗೆ ಕೋಣೆಗೆ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಕಣ್ಣೆದುರೇ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಕಕ್ಕಾಬಿಕ್ಕಿಯಾದ ಹೊಟೇಲ್ ಸಿಬ್ಬಂದಿ ಆರಂಭದಲ್ಲಿ ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದಾರೆ.

​ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮಯೋಚಿತ ಹೆಜ್ಜೆಯಿಂದಾಗಿ ಮತ್ತೊಂದು ಬೃಹತ್ ಅನಾಹುತ ತಪ್ಪಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣವೇ ಆ ಕಟ್ಟಡದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಸಂಭವನೀಯ ಭಾರಿ ಅಪಾಯವನ್ನು ತಡೆಗಟ್ಟಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿದ್ದರೂ, ಅದೃಷ್ಟವಶಾತ್ ಫಾಸ್ಟ್ ಫುಡ್ ಸೆಂಟರ್‌ನಲ್ಲಿದ್ದ ಎಲ್ಲಾ ಸಿಬ್ಬಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.

ಘಟನೆಯಿಂದಾಗಿ ಹೊಟೇಲ್‌ನಲ್ಲಿದ್ದ ಪಾತ್ರೆ ಹಾಗೂ ಇತರ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

Leave a Reply

Your email address will not be published. Required fields are marked *