ಕುಮಟಾ: ಪಟ್ಟಣದ ಕೆಎಸ್‌ಆರ್‌ಟಿಸಿ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದ್ದ ಜೇಬುಗಳ್ಳತನ ಪ್ರಕರಣವನ್ನು ಕೇವಲ 9 ದಿನಗಳಲ್ಲಿ ಭೇದಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಗಸ್ಟ್ 18ರಂದು ಮಧ್ಯಾಹ್ನ ಬಸ್ ಹತ್ತುತ್ತಿದ್ದ ಚಿಕ್ಕೊಳ್ಳಿ ನಿವಾಸಿ ಹಾಗೂ ಹೆಲ್ತ್ ವರ್ಕರ್ ಭಾರತಿ ಶಿವು ನಾಯಕ (59) ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಮಾಂಗಲ್ಯ ಸರದ ಪರ್ಸ್ ಅನ್ನು ಜನಜಂಗುಳಿಯ ಲಾಭ ಪಡೆದು ಕಳ್ಳರು ದೋಚಿದ್ದರು. ಈ ಕುರಿತು ಆಗಸ್ಟ್ 19ರಂದು ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಪೊಲೀಸರು, ಕುಮಟಾ ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಅಳವಡಿಸಿರುವ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಜಾಲಾಡಿದ್ದಾರೆ.
ಶಂಕಿತರ ಚಲನವಲನದ ಆಧಾರದ ಮೇಲೆ ಮಾಹಿತಿ ಕಲೆಹಾಕಿದ ಪೊಲೀಸರು, ಶುಕ್ರವಾರ (ಆ.28) ಬೆಳಿಗ್ಗೆ ಬಡಾಳ–ಸೊಪ್ಪಿನಹೊಸಳ್ಳಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಸೀಮಾಬಾನು (42) ಹಾಗೂ ಶಮ್ಮಾ ಬುಡಿಯಾ (27) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಅವರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರಿಂದ ಅಂದಾಜು 2.60 ಲಕ್ಷ ರೂ. ಮೌಲ್ಯದ 20.180 ಗ್ರಾಂ ತೂಕದ ಬಂಗಾರದ ಕರಿಮಣಿ ಸರವನ್ನು ಪೊಲೀಸರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ.
ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಸಿಬ್ಬಂದಿಗಳಾದ ಗಣೇಶ ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಮತ್ತು ಗುರು ನಾಯಕ ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದಾರೆ. ಪೊಲೀಸರ ಈ ತ್ವರಿತ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್‌ಪಿ ಬಿ. ಗಿರೀಶ್ ಅವರು ಶ್ಲಾಘಿಸಿದ್ದಾರೆ.
ಬಸ್ ನಿಲ್ದಾಣದಂತಹ ಜನಜಂಗುಳಿ ಪ್ರದೇಶಗಳಲ್ಲಿ ಬೆಲೆಬಾಳುವ ವಸ್ತುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹಾಗೂ ಅನುಮಾನಾಸ್ಪದ ಘಟನೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
