Spread the love

ಕುಮಟಾ: ಜಿಲ್ಲೆಯ ಕುಮಟಾದಲ್ಲಿ ಆನ್‌ಲೈನ್‌ ಪಾವತಿಯ ನಕಲಿ ಆ್ಯಪ್ ಬಳಸಿ ವ್ಯಾಪಾರಿಗಳಿಗೆ ವಂಚಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕುಮಟಾದ ಹೊಸ ಬಸ್ ನಿಲ್ದಾಣದ ಪಕ್ಕದಲ್ಲಿರುವ ‘ಮಾತೋಶ್ರೀ ಏಜೆನ್ಸೀಸ್’ ಎಂಬ ಮೊಬೈಲ್ ಶೋರೂಮ್‌ಗೆ ಗ್ರಾಹಕನ ಸೋಗಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ಫೋನ್ ಪೇ (PhonePe) ಮೂಲಕ ಹಣ ಪಾವತಿಸಿರುವುದಾಗಿ ನಕಲಿ ಮೆಸೇಜ್ ತೋರಿಸಿ ವಂಚಿಸಿ ಪರಾರಿಯಾಗಿದ್ದಾನೆ.

ಸೆಪ್ಟೆಂಬರ್ 10 ರಂದು ಮಧ್ಯಾಹ್ನ 2:50 ರ ಸುಮಾರಿಗೆ ಅಂಗಡಿಗೆ ಬಂದಿದ್ದ ಈ ಖದೀಮ, 16,700 ರೂ. ಬೆಲೆಬಾಳುವ ರಿಯಲ್‌ ಮಿ (Realme) ಕಂಪನಿಯ C-100 X (ಡೀಪ್ ಬ್ಲೂ ಬಣ್ಣ, 4GB+64GB) ಮೊಬೈಲ್ ಫೋನ್ ಅನ್ನು ಖರೀದಿಸಿದ್ದ. ಬಳಿಕ ಬಿಲ್ ಪಾವತಿಸಲು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿದಂತೆ ನಟಿಸಿ, 16,700 ರೂ. ಯಶಸ್ವಿಯಾಗಿ ಪಾವತಿಯಾಗಿರುವ ನಕಲಿ ಸ್ಕ್ರೀನ್‌ಶಾಟ್ ಮೆಸೇಜ್ ಅನ್ನು ಅಂಗಡಿ ಮಾಲೀಕನಿಗೆ ತೋರಿಸಿದ್ದಾನೆ. ಹಣ ತಮ್ಮ ಖಾತೆಗೆ ಜಮೆಯಾಗಿರುವ ಬಗ್ಗೆ ಮಾಲೀಕರು ಖಚಿತಪಡಿಸಿಕೊಳ್ಳುವ ಮುನ್ನವೇ ಆತ ಮೊಬೈಲ್ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಅಂಗಡಿಯ ಮಾಲೀಕರಾದ ಕೂಜಳ್ಳಿ ನಿವಾಸಿ ಧನಂಜಯ ಮಂಜುನಾಥ ನಾಯ್ಕ (27) ಅವರು ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 319(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು (ಠಾಣಾ ಅಪರಾಧ ಕ್ರಮಾಂಕ 188/2026), ವಂಚಕನ ಪತ್ತೆಗಾಗಿ ಆಸುಪಾಸಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಇಂತಹ ಡಿಜಿಟಲ್ ವಂಚನೆಗಳು ಹೆಚ್ಚುತ್ತಿದ್ದು, ಅಂಗಡಿ ಮಾಲೀಕರು ಗ್ರಾಹಕರಿಂದ ಹಣ ತಮ್ಮ ಬ್ಯಾಂಕ್ ಖಾತೆಗೆ ಬಂದಿರುವುದನ್ನು ಖಚಿತಪಡಿಸಿಕೊಂಡ ಬಳಿಕವೇ ವಸ್ತುಗಳನ್ನು ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿದೆ.

Leave a Reply

Your email address will not be published. Required fields are marked *