Spread the love

ಹಳಿಯಾಳ: ತಾಲೂಕಿನಲ್ಲಿ ವೃದ್ಧೆಯೊಬ್ಬರ ಮನೆಗೆ ಅಕ್ರಮವಾಗಿ ನುಗ್ಗಿ, ಬೆದರಿಸಿ ಕೊರಳಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಹಳಿಯಾಳ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1,20,000 ಮೌಲ್ಯದ ಚಿನ್ನದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 7 ರಂದು ಬೆಳಿಗ್ಗೆ ಹಳಿಯಾಳದ ಮನೆಯೊಂದರಲ್ಲಿ ವೃದ್ಧೆಯೊಬ್ಬರು ಒಂಟಿಯಾಗಿದ್ದ ವೇಳೆ ಒಳನುಗ್ಗಿದ ಆರೋಪಿ ಮಂಜುನಾಥ ಜುಂಜವಾಡಕರ, ಆಕೆಯನ್ನು ಭಯಪಡಿಸಿ ಕೊರಳಲ್ಲಿದ್ದ ಬಂಗಾರದ ಸರವನ್ನು ಬ್ಲೇಡ್‌ನಿಂದ ಕತ್ತರಿಸಿ ದರೋಡೆ ಮಾಡಿ ಪರಾರಿಯಾಗಿದ್ದ. ಈ ಸರದಲ್ಲಿ 6 ಚಿನ್ನದ ಕೊಳವೆಗಳು, 4 ಗುಂಡುಗಳು ಹಾಗೂ 2 ತಾಳಿಗಳಿದ್ದವು. ಘಟನೆ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಕಲಂ 332(ಸಿ), 309(4), 351(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಚುರುಕುಗೊಳಿಸಿದ್ದರು. ಬಾತ್ಮೀದಾರರಿಂದ ದೊರೆತ ಖಚಿತ ಮಾಹಿತಿ ಹಾಗೂ ತಾಂತ್ರಿಕ ಸುಳಿವುಗಳ ಆಧಾರದ ಮೇಲೆ, ಸೆಪ್ಟೆಂಬರ್ 10 ರಂದು ಧಾರವಾಡದ ತಪೋವನ ನಗರದಲ್ಲಿ ಆರೋಪಿಗಳಾದ ಮಂಜುನಾಥ ಶಿವಾಜಿ ಜುಂಜವಾಡಕರ ಮೂಲತಃ ಹಳಿಯಾಳದ ಹಂಪಿಹೊಳೆ, ಹಾಲಿ ಧಾರವಾಡದ ತಪೋವನ ನಗರ ವಾಸಿ ಹಾಗೂ ಆತನ ಸಹಚರ ಅರ್ಜುನ್ ಬಸಪ್ಪ ಹಡಪದ ಸಾ: ಹಳ್ಳಿಗೇರಿ, ಧಾರವಾಡ ಎಂಬುವವರನ್ನು ಬಂಧಿಸಲಾಯಿತು. ವಿಚಾರಣೆ ವೇಳೆ ಆರೋಪಿಗಳು ಕೃತ್ಯವೆಸಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 1.20 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 50,000 ಮೌಲ್ಯದ ಎಚ್.ಎಫ್ ಡಿಲಕ್ಸ್ ಬೈಕ್ (KA-65 EN-2055) ಅನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್ (IPS), ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಹಾಗೂ ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರ ಮಾರ್ಗದರ್ಶನದಲ್ಲಿ, ಹಳಿಯಾಳ ಸಿಪಿಐ ಭೀಮಣ್ಣ ಸೋರಿ ನೇತೃತ್ವದಲ್ಲಿ ಪಿಎಸ್ಐಗಳಾದ ಕುಮಾರ್ ಕಾಂಬಳೆ, ಮಹೇಶ ಮಾಳಿ ಹಾಗೂ ಸಿಬ್ಬಂದಿಗಳ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ತ್ವರಿತವಾಗಿ ಪ್ರಕರಣ ಭೇದಿಸಿದ ತನಿಖಾ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *