ಭಟ್ಕಳ: ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳ್ನಿ ಕನ್ನಡ ಶಾಲೆಯ ಸಮೀಪ ವಾಹನ ತಾಗಿದ ಸಣ್ಣ ವಿಚಾರಕ್ಕೆ ಗಲಾಟೆ ನಡೆಸಿ, ಬೊಲೆರೋ ಚಾಲಕನಿಗೆ ಬೆದರಿಕೆ ಹಾಕಿ ನಗದು ಹಾಗೂ ವಾಹನದ ಕೀ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಸೆಪ್ಟೆಂಬರ್ 21 ರ ರಾತ್ರಿ ಸುಮಾರು 7:30 ರ ವೇಳೆಗೆ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಬೇಳ್ನಿ ನಿವಾಸಿ ಹಾಗೂ ಬೊಲೆರೋ ವಾಹನದ ಚಾಲಕ ಗಣೇಶ ತಿಮ್ಮಪ್ಪ ಖಾರ್ವಿ (23) ಎಂಬುವವರು ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಸ್ಕೂಟಿ ಸವಾರನ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರಿನ ವಿವರಗಳ ಪ್ರಕಾರ, ಗಣೇಶ ಖಾರ್ವಿ ಅವರು ಕೆಎ-21/ಬಿ-9866 ನೋಂದಣಿ ಸಂಖ್ಯೆಯ ಬೊಲೆರೋ ವಾಹನದಲ್ಲಿ ಮಾವಿನಕುರ್ವೆ ಬಂದರಿನಿಂದ ಮೀನು ಲೋಡ್ ಮಾಡಿಕೊಂಡು ಮಲ್ಪೆಗೆ ತೆರಳುತ್ತಿದ್ದರು. ರಾತ್ರಿ 7:30 ರ ಸುಮಾರಿಗೆ ಬೇಳ್ನಿ ಶಾಲೆಯ ಬಳಿ ತಲುಪಿದಾಗ, ಎದುರಿನಿಂದ ಬಿಳಿ ಬಣ್ಣದ ಆಕ್ಸೆಸ್ 125 ಸ್ಕೂಟಿಯಲ್ಲಿ (ನಂ: ಕೆಎ-20/6495) ಬಂದ ಸವಾರ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದನು. ಚಾಲಕ ಗಣೇಶ ಎರಡು ಬಾರಿ ಹಾರ್ನ್ ಮಾಡಿದರೂ ಸ್ಕೂಟಿ ಸವಾರ ಏಕಾಏಕಿ ರಸ್ತೆಯ ಮಧ್ಯದಲ್ಲೇ ವಾಹನ ನಿಲ್ಲಿಸಿದ್ದಾನೆ. ಈ ವೇಳೆ ಬೊಲೆರೋ ಬ್ರೇಕ್ ಹಾಕಿದರೂ ನಿಯಂತ್ರಣಕ್ಕೆ ಬಾರದೆ ಸ್ಕೂಟಿಯ ಹಿಂಭಾಗಕ್ಕೆ ಲಘುವಾಗಿ ತಾಗಿ ನಂಬರ್ ಪ್ಲೇಟ್ ಜಖಂಗೊಂಡಿದೆ.
ಇದರಿಂದ ಕೆರಳಿದ ಸ್ಕೂಟಿ ಸವಾರ ಕೆಳಗಿಳಿದು ಬಂದು ಚಾಲಕನಿಗೆ ಆವಾಜ್ ಹಾಕಿ ಗಲಾಟೆ ಶುರುಮಾಡಿದ್ದಾನೆ. ಆಗ ಚಾಲಕ ಗಣೇಶ ತಮ್ಮ ಮಾಲೀಕರಿಗೆ ಕರೆ ಮಾಡಿ ವಾಹನದ ದುರಸ್ತಿ ವೆಚ್ಚ ಭರಿಸುವುದಾಗಿ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ, ರೊಚ್ಚಿಗೆದ್ದ ಸ್ಕೂಟಿ ಸವಾರ ಬೊಲೆರೋ ವಾಹನದ ಕೀ ಜೊತೆಗೆ ಗಣೇಶ ಅವರ ಅಂಗಿಯ ಜೇಬಿನಲ್ಲಿದ್ದ ಬರೋಬ್ಬರಿ 15,000 ರೂಪಾಯಿ ನಗದನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸ್ವಲ್ಪ ಸಮಯದ ಬಳಿಕ ಮತ್ತೆ ವಾಪಸ್ ಬಂದಾಗ ಸ್ಥಳೀಯರು ಸೇರುವುದನ್ನು ಕಂಡು ಸ್ಕೂಟಿಯೊಂದಿಗೆ ಭಟ್ಕಳ ನಗರದ ಕಡೆಗೆ ಪರಾರಿಯಾಗಿದ್ದಾನೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 304(2) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ಸ್ಕೂಟಿ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
