Spread the love

ಶಿರಸಿ: ಆಸ್ತಿಯಲ್ಲಿ ಪಾಲು ಕೇಳಿದ ಹಿನ್ನೆಲೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಶಿರಸಿಯ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಹಳಿಯಾಳ ತಾಲೂಕಿನ ಬಿದ್ರಳ್ಳಿ ಗ್ರಾಮದ ನಿವಾಸಿ ಕೇಶವ ಪಾಂಡುರಂಗ ಕಿತ್ತೂರಕರ್ ತಮ್ಮ ಆಸ್ತಿಯಲ್ಲಿ ಪಾಲು ಕೇಳಿದ್ದ ಹಿನ್ನೆಲೆಯಲ್ಲಿ, ಅದನ್ನು ತಪ್ಪಿಸಲು ಅಕ್ಷಯ ಅಲಿಯಾಸ್ ಆಕಾಶ ಪಾಂಡುರಂಗ ಕಿತ್ತೂರಕರ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಪಾಂಡುರಂಗ ಕಿತ್ತೂರಕರ್ ಸೇರಿದಂತೆ ಒಟ್ಟು ಐವರು ಆರೋಪಿಗಳು ಸಂಚು ರೂಪಿಸಿ ಕೊಲೆ ನಡೆಸಿದ್ದರು.

ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪುರ ಅವರು 15-10-2019ರಂದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ಕಾರವಾರ ಪೀಠದ ಶಿರಸಿ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯಲ್ಲಾಪುರ ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ಅವರು ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ರಾಜೇಶ್ ಮಳಗಿಕರ್ ಅವರು ಸಮರ್ಥವಾದ ವಾದ ಮಂಡಿಸಿ, ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

Leave a Reply

Your email address will not be published. Required fields are marked *