Spread the love

ಕಾರವಾರ: ಆಕಸ್ಮಿಕವಾಗಿ ಬೆಂಕಿ ತಗುಲಿ ಬಡ ಕುಟುಂಬವೊಂದರ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳಗೇರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೆಂಕಿ ಅವಘಡದಿಂದ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಂದಿದ್ದು, ಇದೀಗ ಸರ್ಕಾರ ಹಾಗೂ ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

ಸುಳಗೇರಿ ಗ್ರಾಮದ ದೀಪಕ ಚಿಂತಾಮಣಿ ನಾಯ್ಕ ಅವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ಬಟ್ಟೆ, ಪಾತ್ರೆಗಳು, ದಿನಬಳಕೆಯ ವಸ್ತುಗಳು ಸೇರಿದಂತೆ ಅಗತ್ಯ ದಾಖಲೆಗಳೂ ಸಂಪೂರ್ಣ ಸುಟ್ಟುಹೋಗಿವೆ. ಮನೆಯಲ್ಲಿದ್ದ ಬಹುತೇಕ ವಸ್ತುಗಳು ನಾಶವಾಗಿರುವುದರಿಂದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ದೀಪಕ ನಾಯ್ಕ ಅವರು ಅರಣ್ಯ ಇಲಾಖೆಯಲ್ಲಿ ತಾತ್ಕಾಲಿಕ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಇಬ್ಬರೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏಕಾಏಕಿ ಸಂಭವಿಸಿದ ಬೆಂಕಿ ಅವಘಡದಿಂದ ಕುಟುಂಬ ಆಘಾತಕ್ಕೊಳಗಾಗಿದ್ದು, ಮನೆ ಕಳೆದುಕೊಂಡಿರುವುದರ ಜೊತೆಗೆ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸುವ ಬಗ್ಗೆಯೂ ಆತಂಕ ಎದುರಾಗಿದೆ.

ಅರಣ್ಯ ಪ್ರದೇಶದಲ್ಲಿರುವ ಸುಳಗೇರಿ ಗ್ರಾಮವು ಕದ್ರಾದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ದುರ್ಗಮ ಪ್ರದೇಶದಲ್ಲಿರುವ ಈ ಕುಟುಂಬಕ್ಕೆ ಸಂಭವಿಸಿರುವ ನಷ್ಟವನ್ನು ಪರಿಗಣಿಸಿ ಸರ್ಕಾರ ಮಾನವೀಯ ನೆಲೆಯಲ್ಲಿ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕು ಎಂದು ಸ್ಥಳೀಯ ಮುಖಂಡ ನಾಗರಾಜ ನಾಯ್ಕ ಆಗ್ರಹಿಸಿದ್ದಾರೆ.

ಇದೇ ವೇಳೆ ಬೆಂಕಿ ಅವಘಡದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದ ನೆರವಿಗೆ ಸಹೃದಯಿಗಳು ಮುಂದೆ ಬರಬೇಕು. ತಮ್ಮ ಕೈಲಾದಷ್ಟು ಆರ್ಥಿಕ ಅಥವಾ ಅಗತ್ಯ ವಸ್ತುಗಳ ನೆರವು ನೀಡುವ ಮೂಲಕ ಕುಟುಂಬಕ್ಕೆ ಆಸರೆಯಾಗಬೇಕು ಎಂದು ನಾಗರಾಜ ನಾಯ್ಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *