ಕಾರವಾರ: ತಾಲೂಕಿನಾದ್ಯಂತ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಮುಂದುವರಿದಿವೆ. ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸದಾಶಿವಗಡ ಹಾಗೂ ಅಸ್ನೋಟಿ ಗ್ರಾಮದ ಎರಡು ಪ್ರತ್ಯೇಕ ದೇವಸ್ಥಾನಗಳಲ್ಲಿ ಸಾವಿರಾರು ರೂಪಾಯಿ ಮೌಲ್ಯದ ಬೆಲೆಬಾಳುವ ಹಿತ್ತಾಳೆ ದೀಪ ಹಾಗೂ ಇತರ ಪೂಜಾ ಸಾಮಗ್ರಿಗಳನ್ನು ಖದೀಮರು ಕಳವು ಮಾಡಿದ್ದಾರೆ. ಈ ಸಂಬಂಧ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೂಜಾರಿಗಳು ಭಾನುವಾರದಂದು ಚಿತ್ತಾಕುಲಾ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ಮೊದಲನೇ ಪ್ರಕರಣವು ಸದಾಶಿವಗಡದ ಮಾಲ್ದಾರವಾಡಾದಲ್ಲಿರುವ ಗಜನೀಕರ ಕುಟುಂಬದ ಕುಲದೇವರಾದ ಶ್ರೀ ಕಾಳೋಬಾ ದೇವಸ್ಥಾನದಲ್ಲಿ ನಡೆದಿದೆ. ಜೂನ್ ಐದರಂದು ಬೆಳಿಗ್ಗೆ ಒಂಬತ್ತುವರೆ ಸುಮಾರಿಗೆ ಪೂಜೆ ಸಲ್ಲಿಸಿ ತೆರಳಿದ್ದ ದೇವಸ್ಥಾನದವರು, ಸಂಜೆ ಐದುವರೆ ಸುಮಾರಿಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಸಭಾಂಗಣದಲ್ಲಿ ಇಟ್ಟಿದ್ದ ಅಂದಾಜು ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ ಸುಮಾರು ನಾಲ್ಕು ಅಡಿ ಎತ್ತರದ ಹಿತ್ತಾಳೆಯ ಕಾಲು ದೀಪವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ದೇವಸ್ಥಾನದ ಕುಳಾವಿಗಳು ಮತ್ತು ಕಮಿಟಿ ಸದಸ್ಯರು ಸಭೆ ನಡೆಸಿ ಚರ್ಚಿಸಿದ ಬಳಿಕ, ದೇವಭಾಗ ರಸ್ತೆಯ ನರಸಿಂಹಶಿಟ್ಟಾ ನಿವಾಸಿ ಮಂಗೇಶ ದತ್ತಾ ಗಜೀನಕರ (53) ಅವರು ಜೂನ್ ಏಳರಂದು ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಎರಡನೇ ಪ್ರಕರಣವು ಕಾರವಾರ ತಾಲೂಕಿನ ಅಸ್ನೋಟಿಯಲ್ಲಿರುವ ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನದಲ್ಲಿ ವರದಿಯಾಗಿದೆ. ಮೇ ಇಪ್ಪತ್ತನಾಲ್ಕರಂದು ಮಧ್ಯಾಹ್ನ ದೇವಸ್ಥಾನದ ಪೂಜಾರಿ ಕೃಷ್ಣಾಪುರ ಕೊಳಗೆ ನಿವಾಸಿ ದೀಪಕ್ ಗೋಪಾಲ ಬಾವಾ (54) ಅವರು ಪೂಜೆ ಮುಗಿಸಿ ಮನೆಗೆ ತೆರಳಿದ್ದರು. ಸಂಜೆ ಏಳು ಗಂಟೆಗೆ ಮರಳಿ ಬಂದಾಗ ಗರ್ಭಗುಡಿಯ ಪಕ್ಕದಲ್ಲಿಟ್ಟಿದ್ದ ಪೂಜಾ ವಸ್ತುಗಳು ನಾಪತ್ತೆಯಾಗಿದ್ದವು. ಯಾರಾದರೂ ತೊಳೆದು ಇಟ್ಟಿರಬಹುದು ಎಂದು ಅವರು ಅಂದು ಸುಮ್ಮನಾಗಿದ್ದರು. ಆದರೆ ಜೂನ್ ಏಳರಂದು ದೇವಸ್ಥಾನ ಹಾಗೂ ಪೂಜಾ ಸಾಮಗ್ರಿಗಳ ಸ್ವಚ್ಛತೆ ಮಾಡುವಾಗ ವಸ್ತುಗಳು ಕಳುವಾಗಿರುವುದು ಖಚಿತವಾಗಿದೆ.
ಅಂದಾಜು ಇಪ್ಪತ್ತು ಸಾವಿರ ಮೌಲ್ಯದ ಒಂದು ಜೊತೆ ನಾಲ್ಕು ಅಡಿ ಎತ್ತರದ ಹಿತ್ತಾಳೆಯ ಸಮಯಿ, ಒಂದು ಸಾವಿರ ಮೌಲ್ಯದ ಮೂರು ಹಿತ್ತಾಳೆಯ ಆರತಿ ತಟ್ಟೆಗಳು ಹಾಗೂ ಐನೂರು ರೂಪಾಯಿ ಮೌಲ್ಯದ ನಾಲ್ಕು ನಿರಂಜನ ದೀಪಗಳನ್ನು ಕಳ್ಳರು ದೋಚಿದ್ದಾರೆ. ಈ ಎರಡೂ ಘಟನೆಗಳ ಕುರಿತು ಚಿತ್ತಾಕುಲಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ಕಲಂ: 305 ಅಡಿ ದಾಖಲಾಗಿದ್ದು, ಕಳ್ಳರಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
