ಕಾರವಾರ: ಕರಾವಳಿ ಕರ್ನಾಟಕದ ಹೆಮ್ಮೆಯ ನೌಕಾ ಪರಂಪರೆಯನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವಿಶೇಷ ಅಭಿಯಾನವನ್ನು ಆರಂಭಿಸಿದೆ. ದಶಕಗಳ ಕಾಲ ಭಾರತದ ಸಮುದ್ರ ಗಡಿಗಳನ್ನು ಕಾಯ್ದಿದ್ದ ಐಎನ್‌ಎಸ್ ಚಪಲ್ ಯುದ್ಧನೌಕೆಯನ್ನು ವೀಕ್ಷಿಸುವಂತೆ ಪ್ರವಾಸಿಗರಿಗೆ ಇಲಾಖೆಯು ಅಧಿಕೃತ ಪೋಸ್ಟ್ ಮೂಲಕ ಆಹ್ವಾನ ನೀಡಿದೆ. “ಗೌರವದ ಲಂಗರು” (Anchored in Honour) ಎಂಬ ಶೀರ್ಷಿಕೆಯಡಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವಿಶೇಷ ಪ್ರಚಾರದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ನೌಕಾಪಡೆಯ ಯುದ್ಧನೌಕೆ K94 ಹಾಗೂ ಸುತ್ತಮುತ್ತಲಿನ ರಮಣೀಯ ಕಡಲತೀರದ ದೃಶ್ಯಗಳನ್ನು ಈ ಪೋಸ್ಟರ್ ಒಳಗೊಂಡಿದೆ.
ಕಡಲತೀರದಲ್ಲಿ ಕಂಗೊಳಿಸುತ್ತಿರುವ ಐಎನ್‌ಎಸ್ ಚಪಲ್
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಕಾಂಕ್ರೀಟ್ ವೇದಿಕೆಯ ಮೇಲೆ ಪ್ರತಿಷ್ಠಾಪಿಸಲಾಗಿರುವ ಈ ಐಎನ್‌ಎಸ್ ಚಪಲ್ (INS Chapal) ವಸ್ತುಸಂಗ್ರಹಾಲಯವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದೊಂದು ‘ಚಮಕ್’ (Chamak) ದರ್ಜೆಯ ಕ್ಷಿಪಣಿ ವಾಹಕ ನೌಕೆಯಾಗಿದ್ದು, 1976ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು ದೇಶದ ಕರಾವಳಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸುದೀರ್ಘ ಸೇವೆಯ ನಂತರ 2005ರಲ್ಲಿ ಈ ನೌಕೆಯನ್ನು ಸೇವೆಯಿಂದ ನಿವೃತ್ತಿಗೊಳಿಸಲಾಯಿತು. ತದನಂತರ ಇದನ್ನು ಕಾರವಾರದ ಸುಂದರ ಕಡಲತೀರದಲ್ಲಿ ಮ್ಯೂಸಿಯಂ ಆಗಿ ಪರಿವರ್ತಿಸಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ.
ನೌಕಾಪಡೆಯ ಸಾಹಸಗಾಥೆಯ ಪ್ರದರ್ಶನ
ಈ ಯುದ್ಧನೌಕೆಯ ಒಳಭಾಗದಲ್ಲಿ ನೌಕಾಪಡೆಯ ಯೋಧರ ಕಾರ್ಯವೈಖರಿಯನ್ನು ಹಾಗೂ ಅಂದಿನ ದಿನಮಾನಗಳನ್ನು ಬಿಂಬಿಸುವ ಸಿಬ್ಬಂದಿಯ ಆಕರ್ಷಕ ಪ್ರತಿಕೃತಿಗಳು (ಮ್ಯಾನೆಕ್ವಿನ್‌ಗಳು) ಮತ್ತು ಯುದ್ಧದಲ್ಲಿ ಬಳಸುವ ಕ್ಷಿಪಣಿಗಳ ಪ್ರತಿಕೃತಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಈ ಮೂಲಕ ಭಾರತೀಯ ನೌಕಾಪಡೆಯ ಶೌರ್ಯ, ಬಲ ಹಾಗೂ ಸಾಹಸಗಾಥೆಯನ್ನು ಪ್ರವಾಸಿಗರಿಗೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕೆಲಸವನ್ನು ಮಾಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಸಮುದ್ರ ತೀರದ ಈ ಐತಿಹಾಸಿಕ ಯುದ್ಧನೌಕೆಯ ಒಳಗೆ ತೆರಳಿ ಭಾರತೀಯ ನೌಕಾಪಡೆಯ ಹೆಮ್ಮೆಯ ಇತಿಹಾಸವನ್ನು ಕಣ್ತುಂಬಿಕೊಳ್ಳಲೇಬೇಕು ಎಂದು ಇಲಾಖೆಯು ಪ್ರವಾಸಿಗರಿಗೆ ಕರೆ ನೀಡಿದೆ.
