Spread the love

ಕಾರವಾರ: ಉತ್ತಮ ಚಾರಿತ್ರ‍್ಯ, ಶಿಸ್ತು, ದೇಶಪ್ರೇಮ ಹಾಗೂ ದುಶ್ಚಟಗಳಿಂದ ಮುಕ್ತವಾದ ಯುವಜನಾಂಗವೇ ದೇಶದ ನಿಜವಾದ ಬಲ ಮತ್ತು ಭವಿಷ್ಯವಾಗಿದ್ದು, ಇಂತಹ ಆರೋಗ್ಯವಂತ ಯುವಸಮುದಾಯವನ್ನು ಬೆಳೆಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ (ಆಡಳಿತ) ಎಂ.ಎಸ್. ಅಲ್ಲಾಬಕಷ್ ಅಭಿಪ್ರಾಯಪಟ್ಟರು.

ಶನಿವಾರ ಕಾರವಾರದ ಬಾಡದಲ್ಲಿರುವ ಶಿವಾಜಿ ಕಲಾ, ವಾಣಿಜ್ಯ ಹಾಗೂ ಬಿ.ಸಿ.ಎ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ವ್ಯಸನ ಮುಕ್ತ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಮಹಾಂತ ಶಿವಯೋಗಿ ಅವರ ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇತ್ತೀಚಿನ ದಿನಗಳಲ್ಲಿ ಯುವಕರು ಗಾಂಜಾ, ಕೊಕೇನ್, ಹೆರಾಯಿನ್‌ನಂತಹ ಮಾರಕ ಮಾದಕ ವಸ್ತುಗಳಿಗೆ ಹೆಚ್ಚಾಗಿ ಬಲಿಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಚಲನಚಿತ್ರಗಳು ಹಾಗೂ ಜಾಹೀರಾತುಗಳಲ್ಲಿ ನಟರು ಪ್ರದರ್ಶಿಸುವ ದೃಶ್ಯಗಳನ್ನು ನೋಡಿ ಯುವಜನತೆ ಪ್ರೇರೇಪಿತರಾಗಬಾರದು ಎಂದು ಕಿವಿಮಾತು ಹೇಳಿದರು. ಮಾದಕ ವಸ್ತುಗಳ ಸೇವನೆಯು ಕೇವಲ ಆರೋಗ್ಯವನ್ನು ಹಾಳುಮಾಡುವುದಲ್ಲದೆ, ವ್ಯಕ್ತಿಯ ಇಡೀ ಜೀವನವನ್ನೇ ಸರ್ವನಾಶಗೊಳಿಸುತ್ತದೆ. ಹೀಗಾಗಿ ಕಾಲೇಜು ಹಂತದಲ್ಲಿ ಸನ್ಮಾರ್ಗದಲ್ಲಿ ನಡೆಯುವ ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಅವರ ಯಾವುದೇ ತಪ್ಪುಗಳನ್ನು ಅನುಕರಿಸದೆ ಜೀವನದ ಗುರಿ ಸಾಧನೆಯತ್ತ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಸುಹಾಸ್ ಅವರು, ಜೋಳಿಗೆ ಹಿಡಿದು ಮನೆಮನೆಗೆ ತೆರಳಿ ಜನರಲ್ಲಿದ್ದ ದುಶ್ಚಟಗಳನ್ನೇ ಭಿಕ್ಷೆಯಾಗಿ ಬೇಡಿದ ಡಾ. ಮಹಾಂತ ಶಿವಯೋಗಿಗಳ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿದರು. ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಶೇ. 20ರಷ್ಟು ಮಂದಿ ಮದ್ಯಪಾನ ಹಾಗೂ ಶೇ. 45ರಷ್ಟು ಮಂದಿ ತಂಬಾಕು ಉತ್ಪನ್ನಗಳಿಗೆ ದಾಸರಾಗಿದ್ದು, ಕರ್ನಾಟಕದಲ್ಲಿ ಈ ಪ್ರಮಾಣ ಕ್ರಮವಾಗಿ ಶೇ. 16 ಹಾಗೂ 30ರಷ್ಟಿದೆ ಎಂಬ ಆತಂಕಕಾರಿ ಅಂಕಿಅಂಶಗಳನ್ನು ತೆರೆದಿಟ್ಟರು. ಮಾದಕ ವಸ್ತುಗಳಿಂದ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಶಿವಾಜಿ ಮಹಾವಿದ್ಯಾಲಯದ ಪ್ರಾಂಶುಪಾಲ ತಾರನಾಥ ಹರಿಕಂತ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಕ್ರೀಡಾ ಇಲಾಖೆಯ ರವಿ ನಾಯ್ಕ, ತಹಶೀಲ್ದಾರ್ ಪ್ರಮೋದ ನಾಯ್ಕ, ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಬಿ. ಶಿವಕುಮಾರ್ ಸ್ವಾಗತಿಸಿದರೆ, ಶಿಕ್ಷಕಿ ವನಿತಾ ಶೇಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *