Spread the love

ಕುಮಟಾ: ವಿವಾಹಿತ ಧರ್ಮಗುರುವೊಬ್ಬನ ಜೊತೆ 22 ವರ್ಷದ ಯುವತಿಯೊಬ್ಬಳು ಓಡಿಹೋದ ಘಟನೆ ನಡೆದಿದ್ದು, ಠಾಣೆಯಲ್ಲಿ ಪೋಷಕರು ಎಷ್ಟೇ ಕಣ್ಣೀರಿಟ್ಟು ಕಾಡಿಬೇಡಿದರೂ ಯುವತಿ ಮಾತ್ರ ತನ್ನ ಪ್ರಿಯಕರನೊಂದಿಗೇ ತೆರಳಿದ್ದಾಳೆ.

ಮಂಗಳೂರಿನ ಅಸೈಗೋಳಿ ನಿವಾಸಿಯಾಗಿರುವ 40 ವರ್ಷದ ಅಶ್ರಫ್ ಸ-ಅದಿ ಈಗಾಗಲೇ ಮದುವೆಯಾಗಿ ಮಕ್ಕಳಿರುವ ವ್ಯಕ್ತಿ. ಈತ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮದರಸಾವೊಂದರಲ್ಲಿ ಹಲವು ವರ್ಷಗಳ ಕಾಲ ಧರ್ಮಗುರುವಾಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ಕುಮಟಾದ ಬೆಟ್ಕುಳಿ ನಿವಾಸಿ ದಾವುದ್ ಖಾಸಿಂ ಎಂಬುವವರ ಪುತ್ರಿ ಮಗದುಮ್ಮ ದಾವುದ್ ಬುದ್ವನ್ (22) ಎಂಬ ಯುವತಿಯೊಂದಿಗೆ ಪ್ರೇಮಾಂಕುರವಾಗಿದೆ. ಇವರಿಬ್ಬರು ಊರು ಬಿಟ್ಟು ಮಂಗಳೂರಿಗೆ ಓಡಿಬಂದಿದ್ದರು.

ಠಾಣೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪೋಷಕರು: 

ಮಗಳನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಯುವತಿಯ ಕುಟುಂಬಸ್ಥರು, ಕೋಣಾಜೆ ಪೊಲೀಸ್ ಠಾಣೆಗೆ ತೆರಳಿ ಕಣ್ಣೀರಿಟ್ಟಿದ್ದಾರೆ. ಯುವತಿ ವಯಸ್ಕಳಾಗಿರುವ ಕಾರಣ, ಪೊಲೀಸರು ಅಶ್ರಫ್ ಹಾಗೂ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಎಷ್ಟೇ ಕಾಡಿಬೇಡಿದರೂ ಯುವತಿ ಮಾತ್ರ ಅವರೊಂದಿಗೆ ವಾಪಸ್ ಹೋಗಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ.

ಧರ್ಮಗುರುವಿನೊಂದಿಗೇ ಹೋದ ಯುವತಿ: 

ಕುಟುಂಬಸ್ಥರ ಕಣ್ಣೀರಿಗೆ ಕ್ಯಾರೇ ಅನ್ನದ ಯುವತಿ, ತಾನು ಧರ್ಮಗುರು ಅಶ್ರಫ್ ಜೊತೆಯಲ್ಲೇ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಅಲ್ಲದೆ, ಎಲ್ಲರ ಎದುರಲ್ಲೇ ಪೊಲೀಸರಿಗೆ ಅಧಿಕೃತ ಹೇಳಿಕೆ ದಾಖಲಿಸಿ ಆತನೊಂದಿಗೇ ತೆರಳಿದ್ದಾಳೆ. ಕಣ್ಣೆದುರೇ ಮಗಳು ಬೇರೊಬ್ಬನ ಜೊತೆ ಹೋಗುತ್ತಿರುವುದನ್ನು ನೋಡಿ ತಂದೆ-ತಾಯಿ ಠಾಣೆಯ ಅಂಗಳದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಘಟನೆ ನೆರೆದವರ ಕರುಳು ಹಿಂಡುವಂತಿತ್ತು.

Leave a Reply

Your email address will not be published. Required fields are marked *