Spread the love

ಕುಮಟಾ: ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದು ದನದ ಕೊಟ್ಟಿಗೆಗೆ ನುಗ್ಗಿ ಆಕಳ ಕರುವಿನ ಮೇಲೆ ದಾಳಿ ನಡೆಸಿ ಸಾಯಿಸಿರುವ ಘಟನೆ ತಾಲೂಕಿನ ಕತಗಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕತಗಾಲ್ ಅರಣ್ಯ ವಲಯದ ಎಡ್ತಾರೆ ಗ್ರಾಮದಲ್ಲಿ ನಡೆದಿದೆ.

ಮಧ್ಯರಾತ್ರಿ ಕರುವಿನ ಮೇಲೆ ದಾಳಿ: ಗ್ರಾಮದ ಸಾವಿತ್ರಿ ಮಂಜುನಾಥ್ ಪಟಗಾರ್ ಎಂಬುವವರ ಮನೆಯ ಕೊಟ್ಟಿಗೆಗೆ ಭಾನುವಾರ ಮಧ್ಯರಾತ್ರಿ ಚಿರತೆ ನುಗ್ಗಿದೆ. ಕರುವಿನ ಮೇಲೆ ಮುಗಿಬಿದ್ದ ಚಿರತೆ, ಅದನ್ನು ಕೊಂದು ಎಳೆದೊಯ್ಯುವ ಪ್ರಯತ್ನ ಮಾಡಿದೆ. ಈ ವೇಳೆ ಶಬ್ದ ಕೇಳಿ ಮನೆಯವರು ಎಚ್ಚರಗೊಂಡು ಹೊರಬರುತ್ತಿದ್ದಂತೆ ಚಿರತೆ ಕರುವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ. ಕರುವು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದೆ.

ಚಿರತೆ ಸೆರೆಗೆ ಆಗ್ರಹ: ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಡ್ತಾರೆ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ಜನರು ಆತಂಕದಲ್ಲೇ ದಿನದೂಡುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣವೇ ಬೋನು ಇರಿಸಿ ಚಿರತೆಯನ್ನು ಸೆರೆಹಿಡಿದು ಕಾಡಿಗೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *