ಬೆಂಗಳೂರು: ತೃತೀಯ ಭಾಷೆ ಹಿಂದಿ ವಿಷಯದ ಮೌಲ್ಯಮಾಪನ ಹಾಗೂ ಅಂಕ ನೀಡಿಕೆ ಕುರಿತಾದ ಹಲವು ದಿನಗಳ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದ್ದು, 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು (ಏಪ್ರಿಲ್ 23) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಹೈಕೋರ್ಟ್ ನಿರ್ದೇಶನದಂತೆ ತೃತೀಯ ಭಾಷೆ ಹಿಂದಿಗೆ ಗ್ರೇಡ್ ಬದಲಾಗಿ ಅಂಕಗಳನ್ನೇ ನೀಡಲು ಶಿಕ್ಷಣ ಇಲಾಖೆ ಅಂತಿಮ ನಿರ್ಧಾರ ಕೈಗೊಂಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಈ ಹಿಂದೆ ಹಿಂದಿಗೆ ಕೇವಲ ‘ಗ್ರೇಡ್’ ನೀಡಲು ಇಲಾಖೆ ನಿರ್ಧರಿಸಿತ್ತು. ಆದರೆ, ಇದಕ್ಕೆ ಹೈಕೋರ್ಟ್ ತಡೆ ನೀಡಿ ಅಂಕಗಳನ್ನೇ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಿಎಂ, ಸಚಿವ ಮಧು ಬಂಗಾರಪ್ಪ, ಉನ್ನತ ಅಧಿಕಾರಿಗಳು ಹಾಗೂ ಅಡ್ವೊಕೇಟ್ ಜನರಲ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಪಾಲಿಸಲು ನಿರ್ಣಯಿಸಲಾಗಿದೆ.
ಸಿಎಂ ಭೇಟಿಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಮಧು ಬಂಗಾರಪ್ಪ, ನ್ಯಾಯಾಲಯದ ಆದೇಶವನ್ನು ಗೌರವಿಸಿ ಗುರುವಾರ ಮಧ್ಯಾಹ್ನ 12 ಗಂಟೆಗೆ ಅಂಕಗಳ ಆಧಾರದ ಮೇಲೆಯೇ ಫಲಿತಾಂಶ ಪ್ರಕಟಿಸುತ್ತಿದ್ದೇವೆ ಎಂದಿದ್ದಾರೆ. ಫಲಿತಾಂಶ ಪ್ರಕಟಿಸುವ ಸಂದರ್ಭದಲ್ಲಿ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಿಕೆಯ ಕುರಿತಾದ ಸಂಪೂರ್ಣ ವಿವರಗಳನ್ನು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಲ್ಲಾ ವಿಷಯಗಳಿಗೂ ಅಂಕಗಳ ಆಧಾರದ ಮೇಲೆಯೇ ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಂದು ವೇಳೆ ತೃತೀಯ ಭಾಷೆಯ ಅಂಕಗಳ ಸುಧಾರಣೆ ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ವಿಶೇಷವೆಂದರೆ, ಅಂಕ ಸುಧಾರಣೆಗಾಗಿ ಈ ಎರಡನೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷಾ ಶುಲ್ಕ ವಿಧಿಸದೆ ಉಚಿತವಾಗಿ ಅವಕಾಶ ನೀಡಲು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ವಿದ್ಯಾರ್ಥಿಗಳು ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ https://karresults.nic.in ಅಥವಾ ಸರ್ಕಾರದ ‘ಕರ್ನಾಟಕ ಒನ್’ (KarnatakaOne) ಮೊಬೈಲ್ ಆ್ಯಪ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಇದರ ಜೊತೆಗೆ, ಶಾಲೆಗಳಲ್ಲಿ ನೋಂದಾಯಿಸಲಾದ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆಗೆ ಮಂಡಳಿಯ ವತಿಯಿಂದಲೇ ನೇರವಾಗಿ ವಾಟ್ಸಾಪ್ ಹಾಗೂ ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
