Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 5 ರಂದು ಆಯೋಜಿಸಲಾಗಿದ್ದ ‘ಪ್ರಜಾಸೇವೆ’ ಆಂದೋಲನ ಸಭೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಜನರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಈ ಮಹತ್ವಾಕಾಂಕ್ಷಿ ಅಭಿಯಾನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 1,383 ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರಸ್ತುತ ಈ ಎಲ್ಲಾ ಅರ್ಜಿಗಳು ಪರಿಶೀಲನೆ ಹಾಗೂ ವಿಲೇವಾರಿ ಹಂತದಲ್ಲಿವೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಂಕೋಲಾದಲ್ಲಿ ಮತ್ತು ಕುಮಟಾ, ಭಟ್ಕಳ, ಶಿರಸಿ, ಯಲ್ಲಾಪುರ ಹಾಗೂ ಹಳಿಯಾಳ ತಾಲೂಕಿನ ವಿವಿಧ ಹೋಬಳಿಗಳಲ್ಲಿ ಶಾಸಕರ ನೇತೃತ್ವದಲ್ಲಿ ಈ ಜನಪರ ಸಭೆಗಳು ಜರುಗಿದವು. 

ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳ ಪೈಕಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಅತಿ ಹೆಚ್ಚು ಅಂದರೆ 451 ಅರ್ಜಿಗಳು ಸಲ್ಲಿಕೆಯಾಗಿವೆ. ತದನಂತರ ಕಂದಾಯ ಇಲಾಖೆಗೆ 270, ನಗರಾಭಿವೃದ್ಧಿ ಇಲಾಖೆಗೆ 135, ವಸತಿ ಇಲಾಖೆಗೆ 128 ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 102 ದೂರು ಅರ್ಜಿಗಳು ಸಲ್ಲಿಕೆಯಾಗಿವೆ.

ಉಳಿದಂತೆ ಮೂಲಸೌಕರ್ಯ ಹಾಗೂ ಇತರ ಅಗತ್ಯ ಸೇವೆಗಳಿಗೆ ಸಂಬಂಧಿಸಿದ ಇಲಾಖೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಹರಿದುಬಂದಿವೆ. ಹೆಸ್ಕಾಂ ಇಲಾಖೆಗೆ 51, ಲೋಕೋಪಯೋಗಿ ಇಲಾಖೆಗೆ 50, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ 46, ಸಾರಿಗೆ ಇಲಾಖೆಗೆ 30, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 27 ದೂರುಗಳು ಬಂದಿವೆ. ಜೊತೆಗೆ ಸಣ್ಣ ನೀರಾವರಿ ಇಲಾಖೆಗೆ 13, ಕಾರ್ಮಿಕ ಇಲಾಖೆಗೆ 12, ಕೌಶಲ್ಯಾಭಿವೃದ್ಧಿ ಇಲಾಖೆಗೆ 12 ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ 10 ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ.

ಇನ್ನು ಅರಣ್ಯ ಇಲಾಖೆಗೆ 7, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 6, ಡಿಪಿಎಆರ್ ಹಾಗೂ ಜಲಸಂಪನ್ಮೂಲ ಇಲಾಖೆಗೆ ತಲಾ 5, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4, ಕೃಷಿ ಇಲಾಖೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ತಲಾ 3 ಅರ್ಜಿಗಳು ಬಂದಿವೆ. ಸಹಕಾರ, ಮೂಲಸೌಕರ್ಯ, ಸಮಾಜ ಕಲ್ಯಾಣ, ಹಣಕಾಸು, ಗೃಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಿಗೆ ತಲಾ 2 ಹಾಗೂ ಐಟಿ-ಬಿಟಿ ಇಲಾಖೆಗೆ 1 ಅರ್ಜಿ ಸಲ್ಲಿಕೆಯಾಗಿದೆ. 

ಸಲ್ಲಿಕೆಯಾಗಿರುವ ಎಲ್ಲಾ 1,383 ಅರ್ಜಿಗಳ ಪರಿಶೀಲನಾ ಕಾರ್ಯ ಭರದಿಂದ ಸಾಗಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳು ನಿಗದಿತ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಒದಗಿಸಲು ನಿರತರಾಗಿದ್ದಾರೆ. ಶನಿವಾರ ಜರುಗಿದ ಈ ಪ್ರಜಾಸೇವಾ ಅಭಿಯಾನವು ಜಿಲ್ಲೆಯ ನಾಗರಿಕರ ದೀರ್ಘಕಾಲದ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

Leave a Reply

Your email address will not be published. Required fields are marked *