ಯಲ್ಲಾಪುರ: ತಾಲೂಕಿನ ಅರಬೈಲ್ ಗ್ರಾಮದ ಶ್ರೀ ಶಿರಡಿಕೆರೆ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಾತ್ರೆ ವ್ಯಾಪಾರಿಯೊಬ್ಬನನ್ನು ಬಂಧಿಸಿ ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಅರಬೈಲ್ ಗ್ರಾಮದ ಕಸಬೆಯಲ್ಲಿರುವ ಈ ದೇವಸ್ಥಾನದಲ್ಲಿ ಏಪ್ರಿಲ್ 18ರ ರಾತ್ರಿ ಕಳ್ಳತನ ನಡೆದಿತ್ತು. ಗಸ್ತಿನಲ್ಲಿದ್ದ ಕದೀಮರು ದೇವಸ್ಥಾನದ ಗರ್ಭಗುಡಿ ಹಾಗೂ ಪಕ್ಕದ ಕೊಠಡಿಗಳ ಬೀಗವನ್ನು ಕಬ್ಬಿಣದ ರಾಡ್‌ನಿಂದ ಒಡೆದು ಒಳನುಗ್ಗಿದ್ದರು. ದೇವಸ್ಥಾನದಲ್ಲಿದ್ದ ಸುಮಾರು 19,900 ರೂ. ಮೌಲ್ಯದ ಹಿತ್ತಾಳೆಯ ಗಂಟೆಗಳು, ತಾಮ್ರದ ಕೊಡ, ಕೈ ಆರತಿಗಳು, ದೀಪಗಳು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ದೋಚಲಾಗಿತ್ತು. ಈ ಬಗ್ಗೆ 68 ವರ್ಷದ ರೈತ ಶಿವರಾಮ ಕೃಷ್ಣ ಭಟ್ಟ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಏಪ್ರಿಲ್ 22ರಂದು ಯಲ್ಲಾಪುರದ ಅಂಬೇಡ್ಕರ್ ನಗರದ ನಿವಾಸಿ, ವೃತ್ತಿಯಲ್ಲಿ ಪಾತ್ರೆ ವ್ಯಾಪಾರಿಯಾಗಿರುವ ಕೃಷ್ಣಾನಂದ ಪರಶುರಾಮ ಇಂಗಳೆ (28) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ರಹಸ್ಯ ಬಯಲಾಗಿದೆ. ಬಂಧಿತನಿಂದ ಕಳ್ಳತನಕ್ಕೆ ಬಳಸಿದ್ದ 1 ಲಕ್ಷ ರೂ. ಮೌಲ್ಯದ ಬಿಳಿ ಬಣ್ಣದ ಓಮ್ನಿ ಕಾರು (KA-05/P-9926) ಹಾಗೂ ದೇವಸ್ಥಾನದಿಂದ ಕದ್ದಿದ್ದ ಪೂಜಾ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತನಿಂದ ಒಟ್ಟು 1,19,900 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ ಮತ್ತು ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಯಲ್ಲಾಪುರ ಪಿಐ ರಮೇಶ ಹನಾಪುರ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಈ ತಂಡದಲ್ಲಿ ಪಿಎಸ್ಐಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಹಾಗೂ ಸಿಬ್ಬಂದಿಗಳಾದ ಬಸವರಾಜ ಹಗರಿ, ಮಹಾವೀರ ಡಿ.ಎಸ್., ಮಹಾಂತೇಶ ಕಡಪಟ್ಟಿ ಮತ್ತು ಪರಮೇಶ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕಳ್ಳತನ ನಡೆದ ಕೆಲವೇ ದಿನಗಳಲ್ಲಿ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಎಸ್ಪಿ ಅವರು ತಂಡಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
