Spread the love

ಅಂಕೋಲಾ: ತಾಲೂಕಿನ ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮಠಾಕೇರಿಯ ನಿವಾಸಿ  ಔಷಧಿ ವಿತರಕ ರಾಜೀವ್ ಪಿಕಳೆ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದ ಮೂವರು ವ್ಯಕ್ತಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.

ಕಾರವಾರ ತಾಲೂಕಿನ ವೈಲವಾಡ ಗ್ರಾಮದ ನಿವಾಸಿಗಳಾದ ಸುಭಾಷ್ ಕೃಷ್ಣ ನಾಯ್ಕ, ಹರಿಶ್ಚಂದ್ರ ನಾಯ್ಕ ಹಾಗೂ ಅನಿಲ್ ಸುರೇಶ್ ನಾಯ್ಕ ಬಂಧಿತ ಆರೋಪಿಗಳಾಗಿದ್ದು,
ಸುಮಾರು ಹದಿನೈದು ದಿನಗಳ ಹಿಂದೆ ರಾಜೀವ್ ಪಿಕಳೆ ಅವರ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಆರೋಪಿಗಳು ರಾಜೀವ್ ಪಿಕಳೆ ಅವರನ್ನು ಪ್ರಶ್ನೆ ಮಾಡುವ ವಿಡಿಯೋವನ್ನು ಚಿತ್ರೀಕರಿಸಿದ್ದರು. ಆ ಸಂದರ್ಭದಲ್ಲಿ ರಾಜೀವ್ ಅವರು “ಇದು ಕಣ್ತಪ್ಪಿನಿಂದ ಸಂಭವಿಸಿದೆ” ಎಂದು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದರು ಸಹ ಈ ವಿಡಿಯೋವನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎನ್ನಲಾಗಿದೆ.

ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿದ್ದರಿಂದ ತೀವ್ರ ಮುಜುಗರಕ್ಕೊಳಗಾಗಿ ಮನನೊಂದಿದ್ದ ರಾಜೀವ್ ಪಿಕಳೆ ಶುಕ್ರವಾರ ಬೆಳ್ಳಂಬೆಳಗ್ಗೆ ತಮ್ಮ ಮನೆಯಂಗಳದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅವಧಿ ಮೀರಿದ ಮಾತ್ರೆಯ ಆರೋಪ!

ವೈದ್ಯರ ಕಳೆದ ಹಲವು ದಿನಗಳ ಹಿಂದೆ ಅವಧಿ ಮೀರಿದ ಮಾತ್ರೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯ ರಾಜೀವ ಪಿಕಳೆ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಸಂಬಂಧಿಯೊಬ್ಬರು ಚಿಕಿತ್ಸೆ ವೇಳೆ ಅವಧಿಮೀರಿದ ಮಾತ್ರೆಯನ್ನು ನೀಡುತ್ತಿಡುವ ಸಂದರ್ಭದಲ್ಲಿ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.ಈ ವಿಡಿಯೋ ವೈರಲ್ ಆದ ಬಳಿಕ ಬೆನ್ನಲ್ಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು ಎನ್ನಲಾಗಿದೆ.ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ಪಿಕಳೆ ಈ ಘಟನೆಯಿಂದ ನೊಂದು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಆತನ ಅಣ್ಣ ನೀತಿನ್ ಪಿಕಳೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್ ರವರ ಆದೇಶದಂತೆ ಕಾರ್ಯಪ್ರವೃತ್ತರಾದ ಅಂಕೋಲಾ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಮಾನಹಾನಿಕರ ವಿಡಿಯೋ ಹರಿಬಿಟ್ಟ ಆರೋಪದ ಮೇಲೆ  ಕಾರ್ಯಾಚರಣೆ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *