Spread the love

ಗೋಕರ್ಣ:ಕುಮಟಾ ತಾಲೂಕಿನ ನಾಡುಮಾಸ್ಕೆರಿ ಗ್ರಾಪಂ ವ್ಯಾಪ್ತಿಯ ದುಬ್ಬನಸಸಿಯಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ರೆಸಾರ್ಟ್ ಹಾಗೂ ಹೋಮ್ ಸ್ಟೆಗಳನ್ನು ತೆರುವುಗೊಳಿಸುತ್ತಿರುವುದನ್ನು ಖಂಡಿಸಿ
ಇಲ್ಲಿಯ ಸ್ಥಳೀಯರು ಕರಾವಳಿಯ ಎಲ್ಲಾ ಸಿ ಆರ್ ಝಡ್ ವ್ಯಾಪ್ತಿಯ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಿ ದುಬ್ಬನಸಸಿಗೆ ಕಾಲಿಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯರಾದ ಭಗೀರಥ ಗೋವೇಕರ್ ಮಾತನಾಡಿ ಬ್ರಿಟಿಷ್ ಕಾಲದಿಂದಲೂ ದುಬ್ಬನಸಸಿಯಲ್ಲಿ ವಾಸಿಸುತ್ತಿರುವ ನಾವು,ಅಂದು ನಮಗೆ ಸರಕಾರ 2 ವರೆ ಗುಂಟೆ ನೀಡಿತ್ತು, ಅಂದಿನಿಂದ ಕೃಷಿ ಹಾಗೂ ಮೀನುಗಾರಿಕೆಯನ್ನು ನಂಬಿ ಇಲ್ಲಿ ವಾಸಿಸುತ್ತಿದ್ದೇವೆ. ಮತ್ಸ್ಯಕ್ಷಾಮ ಎದುರಾಗಿದ್ದರಿಂದ ಗ್ರಾಪಂ ಅನುಮತಿ ಪಡೆದು ಇಲ್ಲಿಯೇ ಚಿಕ್ಕಪುಟ್ಟ ಹೋಮ್ ಸ್ಟೇ ಕಟ್ಟಿ ಜೀವನ ನಡೆಸುತ್ತಿದ್ದೆವು, ಆದರೆ ಇಂದು ನಮಗೆ ನೆರವಾಗಬೇಕಿದ್ದ ಗ್ರಾಮ ಪಂಚಾಯತಿಯವರು ನಮ್ಮ ಬದುಕಿಗೆ ಕೊಡಲಿ ಪೆಟ್ಟು ಇಟ್ಟಿದ್ದಾರೆ. ಅಂದು ಅನುಮತಿ ನೀಡಿದ್ದ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಪ್ರತಿ ಹೋಮ್ ಸ್ಟೇ ಗೆ ಇಂತಿಷ್ಟು ತೆರಿಗೆಯನ್ನು ಫಿಕ್ಸ್ ಮಾಡಿ, ತೆರಿಗೆ ಕಟ್ಟಿಸಿಕೊಂಡು ಇಂದು ನಮ್ಮ ಹೋಮ್ ಸ್ಟೆಗಳನ್ನು ತೆರವು ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿ ನಮಗೆ ಮೋಸ ಮಾಡಿದ್ದಾರೆ ಮತ್ತು ಏಕಾಏಕಿ ವಿದ್ಯುತ್ ಕಡಿತಗೊಳಿಸಿದ್ದಾರೆ,ಇಂದು ನಮಗೆ ಬದುಕಲು ಕಷ್ಟವಾಗುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ತೆರವು ಕಾರ್ಯಾಚರಣೆಯನ್ನು ನಿಲ್ಲಿಸದೆ ಇದ್ದರೆ ಮುಂದಿನ ದಿನಗಳಲ್ಲಿ ನಮ್ಮ ಜೀವನ ಬೀದಿಗೆ ಬಿಳುವುದಂತೂ ಖಂಡಿತ ಎಂದರು.

ಮತ್ತೋರ್ವ ಸ್ಥಳೀಯರಾದ ನಾಗರಾಜ್ ನಾಯ್ಕ ಆಕ್ರೋಶ ವ್ಯಕ್ತಪಡಿಸಿ ಹೋಮ್ ಸ್ಟೆಗಳಿಗೆ ಪರವಾನಗಿಯನ್ನು ನೀಡಿ ಒಂದು ಕೊಠಡಿಗೆ ಒಂದು ಸಾವಿರದಂತೆ ತೆರಿಗೆಯನ್ನು ಕಟ್ಟಿಸಿಕೊಂಡಿದೆ ಮತ್ತು ಅದೇ ಪಂಚಾಯತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕೊಠಡಿಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿರುವುದು ಯಾವ ನ್ಯಾಯ? ಹಾಗೆಯೇ ದುಬ್ಬನಸಸಿಯಲ್ಲಿ ಗಾಂಜಾ,ವೇಶ್ಯಾವಾಟಿಕೆ ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ದೂರಿರುವ ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ದುಬ್ಬನಸಸಿ ವ್ಯಾಪ್ತಿಯ ಎಲ್ಲಾ ರೆಸಾರ್ಟ್ಗಳ ಹಾಗೂ ಸ್ಥಳೀಯವಾಗಿ ದಾಖಲಾದ ಪ್ರಕರಣಗಳನ್ನು ಒಮ್ಮೆ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಲಿ ಎಲ್ಲರಿಗೂ ತಿಳಿಯುತ್ತದೆ.ಕರಾವಳಿ ಬಾಗದ ಎಲ್ಲಾ ತಾಲೂಕಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಮ್ ಸ್ಟೇ ಹಾಗೂ ರೇಸಾರ್ಟ್ ಗಳ ಬಗ್ಗೆ ಯಾವ ಕ್ರಮ ವಹಿಸಿದೆ ಇಲ್ಲಿಯ ಸಾಮಾನ್ಯ ವರ್ಗದ ಜನರು ಬದುಕಿಗಾಗಿ ನಿರ್ಮಿಸಿಕೊಂಡ ಹೋಮ್ ಸ್ಟೆಗಳನ್ನು ತೆರವುಗೊಳಿಸುತ್ತಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಶಾಂತ ನಾಯಕ ಮಾತನಾಡಿ ಕರಾವಳಿಯ ಎಲ್ಲೆಲ್ಲಿ ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ದೊಡ್ಡ ದೊಡ್ಡವರು ರೆಸಾರ್ಟ್ ಗಳನ್ನು ನಿರ್ಮಿಸಿಕೊಂಡಿದ್ದಾರೋ ಅವುಗಳನ್ನು ಪತ್ತೆಮಾಡಿ ಮೊದಲು ಅದನ್ನು ತೆರವುಗೊಳಿಸಿ. ಅದಲ್ಲದೆ ಇಲ್ಲಿಯ ಜನಸಾಮಾನ್ಯರು ಹೊಟ್ಟೆಪಾಡಿಗಾಗಿ ಮಾಡಿಕೊಂಡ ಚಿಕ್ಕ,ಪುಟ್ಟ ಹೋಮ್ ಸ್ಟೇಗಳಿಗೆ ಅಧಿಕಾರಿಗಳು ರಾತ್ರಿ 9.30 ಕ್ಕೆ ನೋಟಿಸ್ ನೀಡಿ ಬೆಳಿಗ್ಗೆ ತೆರವು ಕಾರ್ಯಾಚರಣೆ ಮಾಡುತ್ತಿರುವ ಕ್ರಮ ಸರಿಯಲ್ಲ, ಹಾಗೆಯೇ ವಿದ್ಯುತ್ ಇಲಾಖೆ ನಮ್ಮ ಬಳಿ ಮುಂಗಡ ಹಣವನ್ನು ತುಂಬಿಸಿಕೊಂಡು ವಿದ್ಯುತ್ ಸಂಪರ್ಕವನ್ನು ನೀಡಿದ್ದು, ಯಾವ ಮಾಹಿತಿಯನ್ನು ನೀಡದೆ ಕಾನೂನು ಬಾಹಿರವಾಗಿ ಏಕಾಏಕಿ ಸಂಪರ್ಕ ಕಡಿತಗೊಳಿಸಿರುವುದು ಗ್ರಾಹಕರಿಗೆ ಮಾಡಿದ ದೊಡ್ಡ ಮೊಸವೇ ಸರಿ.

ಕರಾವಳಿಯಾದ್ಯಂತ ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಅನೇಕಾರು ರಾಜಕಾರಣಿಗಳು, ಉದ್ಯಮಿಗಳು,ಪತ್ರಕರ್ತರು,ಅಧಿಕಾರಿಗಳು ಕಾನೂನು ಬಾಹಿರವಾಗಿ ರೆಸಾರ್ಟ್ಗಳನ್ನು ನಿರ್ಮಿಸಿಕೊಂಡಿದ್ದಾರೆ,ಅದಕ್ಕೆ ಯಾರಪ್ಪನ ಅಣತಿಯು ಬೇಕಾಗಿಲ್ಲ? ನಮ್ಮಂತ ಜನಸಾಮಾನ್ಯರಿಗೆ ಒಂದು ಕಾನೂನು? ಅವರಿಗೊಂದು ಕಾನೂನಾ? ಎಂದು ಪ್ರಶ್ನಿಸಿದರು. ಬಾನುವಾರ ರಜಾ ದಿನವೂ ಕೂಡ ನ್ಯಾಯಾಲಯ ವಿಶೇಷವಾಗಿ ಪೀಠವನ್ನು ಸೃಷ್ಠಿಸಿ, ನಮ್ಮ ಸಮಸ್ಯೆಯನ್ನು ಆಲಿಸಿ ನಮಗೆ ತಡೆಯಾಜ್ಞೆ ಯನ್ನು ನೀಡಿದ್ದು,ನ್ಯಾಯಾಲಯದ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಿದೆ.ಮುಂದಿನ ದಿನಗಲ್ಲಿ ನಾವು ಎಲ್ಲರೂ ಸೇರಿ ನಮಗೆ ತೊಂದರೆಯೊಡ್ಡಿರುವ ಅಧಿಕಾರಿಗಳು ಮತ್ತು ಗ್ರಾಪಂ ಜನಪ್ರತಿನಿಧಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರ ಮಹಿಳೆ ಶೈಲಶ್ರೀ ಅಂಕೋಲೆಕರ್ ಮಾತಾನಾಡಿ ನಮಗೆ ದುಡಿದು ತಿನ್ನಲು ಮತ್ತೇನು ಇಲ್ಲ,ಈ ಸಮುದ್ರವನ್ನೇ ನಂಬಿರುವ ನಾವು ಹೊಟ್ಟೆಪಾಡಿಗಾಗಿ ಚಿಕ್ಕ ಚಿಕ್ಕ ಹೋಮ್ ಸ್ಟೇ ಗಳನ್ನು ನಿರ್ಮಿಸಿಕೊಂಡು  ಜೀವನ ಮಾಡುತ್ತಿದ್ದೇವೆ. ಇದನ್ನು ಸಹ ಸರಕಾರ ಕಸಿದುಕೊಂಡು ನಮಗೆ ಬೀದಿಪಾಲು ಮಾಡುತ್ತಿದೆ,ಈ ಪ್ರದೇಶವನ್ನು ಉಳಿಸಿಕೊಳ್ಳಲು ನಾವು ಜೀವ ಕೊಡಲು ಸಿದ್ದ ಎಂದು ಬಾವುಕದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ದುಬ್ಬನ ಸಸಿಯ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು,ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.

Leave a Reply

Your email address will not be published. Required fields are marked *