Spread the love

ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಪ್ರಥಮ ಅಧ್ಯಕ್ಷರಾಗಿದ್ದ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿ, ಅಂಕೋಲಾದ ರಮಾನಂದ ನಾಯಕ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಬಿ.ಎನ್. ವಾಸರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ರಮಾನಂದ ನಾಯಕ ಅವರನ್ನು ಸ್ಮರಿಸಿಕೊಂಡಿರುವ ವಾಸರೆ ಅವರು, “ನಾಡಿನ ಕೆಲವೇ ಮುತ್ಸದ್ಧಿ ರಾಜಕಾರಣಿಗಳ ಸಾಲಿನಲ್ಲಿ ರಮಾನಂದ ನಾಯಕರು ಸದಾ ಇರುತ್ತಾರೆ” ಎಂದು ಕಂಬನಿ ಮಿಡಿದಿದ್ದಾರೆ.

ರಮಾನಂದ ನಾಯಕರ ವ್ಯಕ್ತಿತ್ವ ಮತ್ತು ಸಾಧನೆ:

ಬಿ.ಎನ್. ವಾಸರೆ ಅವರು ತಮ್ಮ ಶೋಕ ಸಂದೇಶದಲ್ಲಿ ಅಗಲಿದ ಹಿರಿಯ ಚೇತನದ ಅಪರೂಪದ ಗುಣಗಳನ್ನು ಸ್ಮರಿಸಿದ್ದಾರೆ. ಅವರ ಬದುಕು ಮತ್ತು ವ್ಯಕ್ತಿತ್ವವೇ ಎಲ್ಲರಿಗೂ ಒಂದು ಆದರ್ಶ. ಅವರು ಕೇವಲ ರಾಜಕಾರಣಿಯಾಗಿರದೆ, ಜೀವಪರ ಚಿಂತನೆಯ ಕಾಯಕ ಯೋಗಿಯಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಅವರು ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರವಾದದ್ದು.

ರಾಜಕಾರಣದಲ್ಲಿ ತಮ್ಮಗಾಗಿ ಏನನ್ನೂ ಬಯಸದ, ಏನನ್ನೂ ಪಡೆಯದ ನಿಸ್ವಾರ್ಥ ಹಾಗೂ ನಿಷ್ಕಳಂಕ ಮನುಷ್ಯರಾಗಿದ್ದರು. ರಾಜನೀತಿಯ ಜೊತೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿಯೂ ಅಪಾರ ಅನುಭವ ಹೊಂದಿದ್ದ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು, ಅವರು ಕೂಡ ಎಲ್ಲರನ್ನೂ ಪ್ರೀತಿಸುತ್ತಿದ್ದ ಅಜಾತಶತ್ರು ಆಗಿದ್ದರು.

“ಇಂತಹ ಅಪರೂಪದ ಸಜ್ಜನನ ಅಗಲುವಿಕೆ ಉತ್ತರ ಕನ್ನಡ ಜಿಲ್ಲೆಗೊಂದು ತುಂಬಲಾರದ ನಷ್ಟವಾಗಿದೆ. ಅವರ ಹೋರಾಟ, ಚಿಂತನೆಗಳನ್ನು ಮುಂದುವರೆಸುವ ಶಕ್ತಿಯನ್ನು ಎಲ್ಲರೆದೆಯಲ್ಲಿ ಬಿತ್ತಲಿ. ಅಗಲಿದ ಹಿರಿಯ ಚೇತನಕ್ಕೆ ನಮನಗಳು” ಎಂದು ಬಿ.ಎನ್. ವಾಸರೆ ಅವರು ತಮ್ಮ ಸಂದೇಶದಲ್ಲಿ ಗೌರವ ಸಮರ್ಪಿಸಿದ್ದಾರೆ.

Leave a Reply

Your email address will not be published. Required fields are marked *