ಅಂಕೋಲಾ: ತಾಲೂಕಿನ ಬೋಗ್ರಿಬೈಲ್ ಬಳಿ ಸಂಭವಿಸಿದ್ದ ಭೀಕರ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರೈತನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಅಗಸೂರು ಗ್ರಾಮದ ನಿವಾಸಿ, ಕೃಷಿಕ ಮಂಜುನಾಥ ತಿಮ್ಮಣ್ಣ ನಾಯಕ (48) ಮೃತಪಟ್ಟ ದುರ್ದೈವಿ. ಮಾರ್ಚ್ 5 ರಂದು ನಡೆದಿದ್ದ ಈ ಅಪಘಾತದ ಬಳಿಕ ಸತತ ಎರಡು ತಿಂಗಳಿಗೂ ಹೆಚ್ಚು ಕಾಲ ವಿವಿಧ ಆಸ್ಪತ್ರೆಗಳಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ್ದ ಅವರು, ಇದೀಗ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ಉಮಾಕಾಂತ ಅನಂತ ನಾಯಕ (40) ಅವರು ನೀಡಿರುವ ದೂರಿನ ಪ್ರಕಾರ, ಮಾರ್ಚ್ 5 ರಂದು ಸಂಜೆ ಸುಮಾರು 5:45 ರ ವೇಳೆಗೆ ಮಂಜುನಾಥ ಅವರು ತಮ್ಮ ಬೈಕ್‌ನಲ್ಲಿ (KA30/X-5200) ಅಂಕೋಲಾದಿಂದ ಯಲ್ಲಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿ-63 ರಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಬೋಗ್ರಿಬೈಲ್ ಸಮೀಪಿಸುತ್ತಿದ್ದಂತೆ ಎದುರಿನಿಂದ ಬರುತ್ತಿದ್ದ ಲಾರಿಗಳನ್ನು ಕಂಡು ಗಾಬರಿಗೊಂಡು ಏಕಾಏಕಿ ಬ್ರೇಕ್ ಹಾಕಿದ್ದಾರೆ. ಇದರ ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಿದ್ದಿದ್ದು, ಈ ವೇಳೆ ಮಂಜುನಾಥ ಅವರ ತಲೆ, ಕುತ್ತಿಗೆ ಹಾಗೂ ಕೈಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ಅಪಘಾತದ ತಕ್ಷಣವೇ ಗಾಯಾಳುವನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರೀಮ್ಸ್ (KRIMS) ಆಸ್ಪತ್ರೆಗೆ ಹಾಗೂ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಸುದೀರ್ಘ ಚಿಕಿತ್ಸೆಯ ಬಳಿಕ ಮತ್ತೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಮೇ 7 ರಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ಬಿಎನ್‌ಎಸ್-2023 (BNS-2023) ಕಾಯ್ದೆಯ ಕಲಂ 281 ಹಾಗೂ 106 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
