ಭಟ್ಕಳ: ತಾಲೂಕಿನಾದ್ಯಂತ ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಭಾನುವಾರ ಒಂದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದಿರುವ ಭಟ್ಕಳ ಶಹರ ಹಾಗೂ ಗ್ರಾಮೀಣ ಠಾಣಾ ಪೊಲೀಸರು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮೊದಲನೇ ಪ್ರಕರಣವು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಜೂನ್ 7 ರಂದು ಮಧ್ಯಾಹ್ನ 12:30 ರ ಸುಮಾರಿಗೆ ಫಿರ್ದೋಸನಗರದ ಕೋಳಿ ಫಾರ್ಮ್ ಬಳಿ ಜಾಲಿ ಬದ್ರಿಯಾ ಕಾಲೋನಿ ನಿವಾಸಿ ಫೈಜಾನ್ (28) ಎಂಬಾತ ಮಾದಕ ವಸ್ತು ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಈತನನ್ನು ತಡೆದು ಮಾತನಾಡಿಸಿದಾಗ ಬಾಯಿಯಿಂದ ಗಾಂಜಾ ವಾಸನೆ ಬಂದಿದೆ. ಕೂಡಲೇ ಪಿ.ಎಸ್.ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ. ಬಳಿಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ದೃಢಪಟ್ಟಿದ್ದು, ಆತನ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಎರಡನೇ ಪ್ರಕರಣದಲ್ಲಿ ಭಟ್ಕಳ ಶಹರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಂದು ಸಂಜೆ ಆರು ಗಂಟೆ ಸುಮಾರಿಗೆ ಭಟ್ಕಳ ಶಹರದ ಚೌಕ ಬಜಾರ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ಸಿದ್ದಿಕ್ ಸ್ಟ್ರೀಟ್ ನಿವಾಸಿ, ವ್ಯಾಪಾರಿ ಶಯನ್ ಮರ್ಜನ್ (39) ಎಂಬಾತನನ್ನು ಪಿ.ಎಸ್.ಐ ನವೀನ ಎಸ್. ನಾಯ್ಕ ಅವರು ವಶಕ್ಕೆ ಪಡೆದಿದ್ದಾರೆ. ಈತನನ್ನೂ ಸಹ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂರನೇ ಪ್ರಕರಣ ಭಟ್ಕಳ ಶಹರದ ಛಾಯಾ ಲಾಡ್ಜ್ ಹತ್ತಿರ ನಡೆದಿದೆ. ಅಂದು ಸಂಜೆ ಏಳು ಗಂಟೆಗೆ ಆಜಾದ್ ನಗರದ ನಿವಾಸಿ ಇಬ್ರಾಹೀಮ್ ಖಲೀಲ್ ಸೈಯ್ಯದ್ (47) ಎಂಬಾತ ಗಾಂಜಾ ಮತ್ತಿನಲ್ಲಿ ತೂರಾಡುತ್ತಿದ್ದ. ಈತನನ್ನು ಸಂಚಾರಿ ಠಾಣೆಯ ಪಿ.ಎಸ್.ಐ ರವಿ ಎಮ್. ಗಾಂಜೇಕರ ಅವರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದುಬೈ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈತ, ವಿಚಾರಣೆ ವೇಳೆ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದ್ದು, ಈ ಬಗ್ಗೆ ಶಹರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
