ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಭಕ್ತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿರಸಿ-ಮುಂಡಗೋಡ-ಸೌಂದತ್ತಿ ನೂತನ ಬಸ್ ಸೇವೆಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಮಂಗಳವಾರ ಮುಂಡಗೋಡ ಬಸ್ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್, ಧಾರ್ಮಿಕ ಕ್ಷೇತ್ರವಾದ ಸೌಂದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಈ ನೂತನ ಬಸ್ ಸೇವೆ ಹೆಚ್ಚು ಅನುಕೂಲಕರವಾಗಲಿದೆ. ಇದರಿಂದ ಶಿರಸಿ, ಮುಂಡಗೋಡ ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಜನರಿಗೆ ನೇರ ಸಂಪರ್ಕ ಕಲ್ಪಿಸಲಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರವಿಗೌಡ ಪಾಟೀಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ, ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿಯ ತಾಲೂಕು ಅಧ್ಯಕ್ಷ ದೇವು ಪಾಟೀಲ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಸಿ. ಗಲಬಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಗೌಸ್ ಮಕಾನದಾರ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಧರ್ಮರಾಜ ನಾಡಿಗೇರ್, ಪ್ರಮುಖರಾದ ಗೋಪಾಲ ಪಾಟೀಲ್, ರಜಾ ಫಠಾಣ್, ರಫೀಕ್ ಇನಾಮದಾರ್ ಸೇರಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKRTC) ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
