Spread the love

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಸಮೀಪ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದರ ಮೇಲೆ ಬೀದಿ ಶ್ವಾನಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಪರಿಣಾಮ ಜಿಂಕೆ ಸ್ಥಳದಲ್ಲೇ ಮೃ*ತಪಟ್ಟ ದಾರುಣ ಘಟನೆ ವರದಿಯಾಗಿದೆ.

ಸನವಳ್ಳಿ ಗ್ರಾಮದ ಯೋಗಿ ಎಂಬುವವರಿಗೆ ಸೇರಿದ ಜಮೀನಿಗೆ ಕಾಡಿನಿಂದ ಆಹಾರ ಅರಸಿ ಬಂದಿದ್ದ ಜಿಂಕೆಯು ಹೊಲದಲ್ಲಿ ಓಡಾಡುತ್ತಿತ್ತು. ಈ ವೇಳೆ ಏಕಾಏಕಿ ಅಲ್ಲಿಗೆ ಬಂದ ನಾಲ್ಕೈದು ಬೀದಿ ಶ್ವಾನಗಳ ಗುಂಪು ಜಿಂಕೆಯನ್ನು ಬೆನ್ನಟ್ಟಿ ತೀವ್ರವಾಗಿ ದಾಳಿ ನಡೆಸಿವೆ. ಶ್ವಾನಗಳು ಜಿಂಕೆಯ ಮೇಲೆ ಎರಗುತ್ತಿರುವುದನ್ನು ಗಮನಿಸಿದ ಗದ್ದೆ ಮಾಲೀಕ ಹಾಗೂ ಸ್ಥಳೀಯರು ತಕ್ಷಣವೇ ಧಾವಿಸಿ ಶ್ವಾನಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ, ಶ್ವಾನಗಳ ತೀವ್ರ ತರಹದ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಘಟನೆಯ ಕುರಿತು ಮಾಹಿತಿ ತಿಳಿದ ತಕ್ಷಣ ಅರಣ್ಯ ರಕ್ಷಕ ಮುತ್ತುರಾಜ ಹಳ್ಳಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶುವೈದ್ಯರಾದ ಡಾ. ಜಯಚಂದ್ರ ಅವರು ಸ್ಥಳಕ್ಕೆ ಆಗಮಿಸಿ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಅರಣ್ಯ ಇಲಾಖೆಯ ನಿಯಮಾನುಸಾರ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಜು ಗುಬ್ಬಕನವರ, ಶಂಕ್ರಪ್ಪ ಕೆರಿಹೊಲದವರ, ದೇವರಾಜ ಕಳಸಗೇರಿ, ವಾಚರ್ ಹಸನಸಾಬ, ರುದ್ರಪ್ಪ ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *