ಮುಂಡಗೋಡ: ತಾಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ವಿತರಿಸಲಾಗಿರುವ ಪಾದರಕ್ಷೆಗಳು ತೀರಾ ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳಪೆ ಗುಣಮಟ್ಟದ ಈ ಪಾದರಕ್ಷೆಗಳನ್ನು ಧರಿಸಲು ನಿರಾಕರಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು, ಶಾಲೆಯ ಮುಂಭಾಗದಲ್ಲೇ ಅವುಗಳನ್ನು ಬಿಸಾಡುವ ಮೂಲಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಸರ್ಕಾರದ ವತಿಯಿಂದ ಮಕ್ಕಳಿಗೆ ಉಚಿತವಾಗಿ ನೀಡಲಾಗಿರುವ ಈ ಪಾದರಕ್ಷೆಗಳು ಯಾವುದೇ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲ ಹಾಗೂ ಮಕ್ಕಳ ದೈನಂದಿನ ಬಳಕೆಗೆ ಯೋಗ್ಯವಾಗಿಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಯ ಆವರಣದಲ್ಲಿ ಜಮಾಯಿಸಿದ ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಈ ಕುರಿತು ಗಂಭೀರ ಚರ್ಚೆ ನಡೆಸಿದ್ದು, ಮಕ್ಕಳಿಗೆ ವಿತರಿಸುವ ಸೌಲಭ್ಯಗಳು ಸಮರ್ಪಕ ಗುಣಮಟ್ಟದಿಂದ ಕೂಡಿರಬೇಕು ಎಂದು ಆಗ್ರಹಿಸಿದರು.
ತಕ್ಷಣವೇ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಾದರಕ್ಷೆಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಈಗಾಗಲೇ ವಿತರಿಸಲಾಗಿರುವ ಈ ಕಳಪೆ ಪಾದರಕ್ಷೆಗಳನ್ನು ವಾಪಸ್ ಪಡೆದು, ಉತ್ತಮ ಗುಣಮಟ್ಟದ ಪಾದರಕ್ಷೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಕಳಪೆ ಸಾಮಗ್ರಿಗಳನ್ನು ವಿತರಿಸಿ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ವಾತಾವರಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಡಿಎಂಸಿ ಹಾಗೂ ಪೋಷಕರು, ಈ ಕುರಿತು ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಕಳಪೆ ಪಾದರಕ್ಷೆಗಳ ವಿತರಣೆ ಜಾಲದ ಕುರಿತಂತೆ ಅಗತ್ಯ ದಾಖಲೆಗಳು ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಶೀಘ್ರದಲ್ಲೇ ಲೋಕಾಯುಕ್ತರಿಗೆ ಅಧಿಕೃತ ದೂರು ಸಲ್ಲಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು, ಕಳಪೆ ಗುಣಮಟ್ಟದ ವಸ್ತುಗಳನ್ನು ಸರಬರಾಜು ಮಾಡಿದ ಗುತ್ತಿಗೆದಾರರು ಹಾಗೂ ಇದಕ್ಕೆ ಬೆಂಬಲ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಲಾಭಿವೃದ್ಧಿ ಸಮಿತಿ ಪಟ್ಟು ಹಿಡಿದಿದೆ.
