Spread the love

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಸೇವೆಗಳ ಕುರಿತಂತೆ ಸಾರ್ವಜನಿಕರಿಂದ ಕೇಳಿಬರುತ್ತಿರುವ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಲೋಕಸಭಾ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೆಟ್‌ವರ್ಕ್ ಸಮಸ್ಯೆಗಳನ್ನು ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶಿರಸಿಯ ತಮ್ಮ ಸಂಸದರ ಕಾರ್ಯಾಲಯದಲ್ಲಿ ಬಿಎಸ್‌ಎನ್‌ಎಲ್‌ ಹಿರಿಯ ಅಧಿಕಾರಿಗಳ ಜೊತೆ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಈ ನಿರ್ದೇಶನ ನೀಡಿದ್ದಾರೆ.

ಪ್ರವಾಸಿ ತಾಣಗಳಿಗೆ ನೂತನ ಟವರ್, ಸಮಗ್ರ ಸರ್ವೆಗೆ ಆದೇಶ 

ಕೇಂದ್ರ ಸರ್ಕಾರದ 4G ಸ್ಯಾಚುರೇಶನ್ ಯೋಜನೆಯಡಿ ಜಿಲ್ಲೆಯಲ್ಲಿ ಎದುರಾಗಿದ್ದ ಹಲವಾರು ಅಡೆತಡೆಗಳನ್ನು ನಿವಾರಿಸಿ ಈಗಾಗಲೇ 200ಕ್ಕೂ ಹೆಚ್ಚು ನೂತನ ಟವರ್‌ಗಳು ಯಶಸ್ವಿಯಾಗಿ ಕಾರ್ಯಾರಂಭ ಮಾಡಿವೆ. ಇದರ ಜೊತೆಗೆ ಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಪ್ರಮುಖ ಪ್ರವಾಸಿ ತಾಣಗಳಿಗೆ ನೂತನ ಬಿಎಸ್‌ಎನ್‌ಎಲ್‌ ಟವರ್‌ಗಳು ಮಂಜೂರಾಗಿವೆ ಎಂದು ಸಂಸದರು ಸಭೆಯಲ್ಲಿ ತಿಳಿಸಿದರು. ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರು ಹಾಗೂ ಬಿಎಸ್‌ಎನ್‌ಎಲ್‌ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ ಫಲವಾಗಿ, ನೆಟ್‌ವರ್ಕ್ ಇಲ್ಲದ ಗ್ರಾಮಗಳನ್ನು ಗುರುತಿಸಿ ಸರ್ವೆ ನಡೆಸಲು ಕೇಂದ್ರದಿಂದ ಆದೇಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಂಪರ್ಕ ರಹಿತ ಪ್ರದೇಶಗಳನ್ನು ಗುರುತಿಸಿ ಹೊಸ ಟವರ್‌ಗಳ ನಿರ್ಮಾಣಕ್ಕೆ ತ್ವರಿತವಾಗಿ ಸಮಗ್ರ ವರದಿ ಸಲ್ಲಿಸಬೇಕೆಂದು ಅವರು ನಿರ್ದೇಶಿಸಿದರು.

ಯುದ್ಧೋಪಾದಿಯಲ್ಲಿ ತಾಂತ್ರಿಕ ದೋಷಗಳ ದುರಸ್ತಿಗೆ ಎಚ್ಚರಿಕೆ 

ಕೆಲವು ಭಾಗಗಳಲ್ಲಿ ವಿವಿಧ ತಾಂತ್ರಿಕ ದೋಷಗಳು ಹಾಗೂ ವಿದ್ಯುತ್ ಪೂರೈಕೆಯ ವ್ಯತ್ಯಯದಿಂದಾಗಿ ಟವರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಅಡೆತಡೆಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಿ ನೆಟ್‌ವರ್ಕ್ ವ್ಯವಸ್ಥೆಯನ್ನು ಸುಸ್ಥಿತಿಗೆ ತರಬೇಕು ಎಂದು ಆದೇಶಿಸಿದರು. ರಾಜ್ಯದಲ್ಲೇ ಅತಿ ಹೆಚ್ಚು ಬಿಎಸ್‌ಎನ್‌ಎಲ್‌ ಟವರ್‌ಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಗ್ರಾಮೀಣ ಹಾಗೂ ಮಲೆನಾಡು ಭಾಗದ ಬಹುತೇಕ ನಾಗರಿಕರು ಸಂಪೂರ್ಣವಾಗಿ ಬಿಎಸ್‌ಎನ್‌ಎಲ್ ಅನ್ನೇ ನಂಬಿಕೊಂಡಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಶಿಕ್ಷಣ, ಆಡಳಿತ, ಆರ್ಥಿಕ ವಹಿವಾಟು ಸೇರಿದಂತೆ ಪ್ರತಿಯೊಂದು ಕಾರ್ಯಕ್ಕೂ ಮೊಬೈಲ್ ಸಂಪರ್ಕ ಅತ್ಯಗತ್ಯವಾಗಿದ್ದು, ಜನರಿಗೆ ಯಾವುದೇ ಅಡಚಣೆಯಿಲ್ಲದೆ ಗುಣಮಟ್ಟದ ಸೇವೆ ಒದಗಿಸುವುದು ಇಲಾಖೆಯ ಕರ್ತವ್ಯವಾಗಿದೆ ಎಂದು ಅವರು ಎಚ್ಚರಿಸಿದರು.

ಸಮಗ್ರ ವರದಿ ಸಲ್ಲಿಕೆಗೆ ಡೆಡ್‌ಲೈನ್ 

ಜಿಲ್ಲೆಯ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯಿಂದಾಗಿ ಕೆಲವು ದುರ್ಗಮ ಪ್ರದೇಶಗಳಲ್ಲಿ ಉಂಟಾಗುತ್ತಿರುವ ನೆಟ್‌ವರ್ಕ್ ಸಮಸ್ಯೆಗಳನ್ನು ನಿವಾರಿಸಲು ವಿಶೇಷ ಆದ್ಯತೆ ನೀಡಬೇಕು ಹಾಗೂ ಜಿಲ್ಲೆಯಾದ್ಯಂತ ನೆಟ್‌ವರ್ಕ್ ಸ್ಥಿರತೆ ಕಾಪಾಡಲು ಕೈಗೊಂಡ ಕ್ರಮಗಳ ಕುರಿತು ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಯಿತು.

ಈ ಮಹತ್ವದ ಸಭೆಯಲ್ಲಿ ಬಿಎಸ್‌ಎನ್‌ಎಲ್‌ ಮಂಗಳೂರು ವಿಭಾಗದ ಮಹಾಪ್ರಬಂಧಕ (GM) ಹೇಮಂತ್ ಸದಾಶಿವ್, ಕಾರವಾರ ವಿಭಾಗದ ಉಪ ಮಹಾಪ್ರಬಂಧಕ (DGM) ಮಲ್ಲಿಕಾರ್ಜುನ್ ತಾಳಿಕೋಟಿ ಸೇರಿದಂತೆ ಇಲಾಖೆಯ ಪ್ರಮುಖ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *