ಶಿರಸಿ ನಗರದ ಮರಾಟಿಕೊಪ್ಪ ಸಮೀಪದ ವಿದ್ಯಾನಗರ 6ನೇ ಕ್ರಾಸ್‌ನಲ್ಲಿರುವ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ರಾಮಚಂದ್ರ ಕಾಗಲಕರ್ ಅವರ ಮನೆಯಲ್ಲಿ ಭಾನುವಾರ ಕಳ್ಳತನ ನಡೆದಿದ್ದು, ಖದೀಮರು ಅಂದಾಜು 8 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯವರೆಲ್ಲರೂ ಪರ ಊರಿಗೆ ದೇವಸ್ಥಾನಕ್ಕೆ ತೆರಳಿದ್ದ ಸಮಯವನ್ನು ಹೊಂಚು ಹಾಕಿದ ಕಳ್ಳರು, ಮನೆಯ ಬಾಗಿಲ ಬೀಗ ಮುರಿದು ಈ ಕೃತ್ಯವೆಸಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸ ಮಾರುಕಟ್ಟೆ ಠಾಣೆಯ ಪಿಎಸ್‌ಐ ಬಸವರಾಜ ಕನಶೆಟ್ಟಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಗೀತಾ ಕಲಘಟಗಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮನೆ ಕಳ್ಳತನ ಪ್ರಕರಣಗಳ ಕುರಿತು ಜಿಲ್ಲಾ ಹಾಗೂ ಶಿರಸಿ ಪೊಲೀಸ್ ಇಲಾಖೆಯು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದರೂ, ಜನರ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕುಟುಂಬ ಸಮೇತ ದೀರ್ಘಕಾಲ ಪರ ಊರಿಗೆ ಹೋಗುವ ಮುನ್ನ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲಾಖೆ ಪದೇ ಪದೇ ಮನವಿ ಮಾಡುತ್ತಿದ್ದರೂ ಸಾರ್ವಜನಿಕರು ಅದನ್ನು ಪಾಲಿಸುತ್ತಿಲ್ಲ. ಜೊತೆಗೆ ಪ್ರಸ್ತುತ ದಿನಗಳಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಲಭ್ಯವಿದ್ದರೂ, ಅವುಗಳನ್ನು ಅಳವಡಿಸಿಕೊಳ್ಳುವಲ್ಲಿಯೂ ಜನತೆ ಹಿಂದೇಟು ಹಾಕುತ್ತಿರುವುದು ಇಂತಹ ಘಟನೆಗಳಿಗೆ ಆಹ್ವಾನ ನೀಡಿದಂತಾಗಿದೆ. ಇನ್ನಾದರೂ ಸಾರ್ವಜನಿಕರು ಪೊಲೀಸ್ ಇಲಾಖೆಯ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಬೆಲೆಬಾಳುವ ವಸ್ತುಗಳ ರಕ್ಷಣೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
