ಕಾರವಾರ: ನಗರದ ತಹಶೀಲ್ದಾರ್ ಕಚೇರಿಯ ಮೇಲೆ ಬೆಂಗಳೂರಿನಿಂದ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳ ವಿಶೇಷ ತಂಡ ಮಂಗಳವಾರ ದಿಢೀರ್ ದಾಳಿ ನಡೆಸಿದೆ.
ನಾಲ್ವರು ಅಧಿಕಾರಿಗಳನ್ನೊಳಗೊಂಡ ಈ ತಂಡವು ನೇರವಾಗಿ ಕಾರವಾರ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತೀವ್ರ ತಪಾಸಣೆ ಕೈಗೊಂಡಿದೆ. ಕಚೇರಿಗೆ ಆಗಮಿಸಿದ ತಕ್ಷಣ ಅಧಿಕಾರಿಗಳು ತಹಶೀಲ್ದಾರ್ ನಿಶ್ಚಲ್ ನೊರೊನ್ಹಾ ಅವರ ಕೊಠಡಿಗೆ ತೆರಳಿ ಮಹತ್ವದ ಕಡತಗಳು ಹಾಗೂ ಕಚೇರಿಯ ಪ್ರಮುಖ ದಾಖಲೆಗಳ ಕೂಲಂಕಷ ಪರಿಶೀಲನೆ ಮತ್ತು ವಿಚಾರಣೆ ನಡೆಸುತ್ತಿದ್ದಾರೆ.
ಈ ತಪಾಸಣೆಯ ವೇಳೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಮೊಬೈಲ್ ಫೋನ್ಗಳನ್ನು ಲೋಕಾಯುಕ್ತ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಅಧಿಕಾರಿಗಳ ತಂಡವು ಕೆಎ-01-ಜಿ-5857 (KA-01-G-5857) ನೋಂದಣಿ ಸಂಖ್ಯೆಯ ವಾಹನದಲ್ಲಿ ಕಾರ್ಯಾಚರಣೆಗೆ ಆಗಮಿಸಿದ್ದು, ಸದ್ಯ ಕಚೇರಿಯ ಬಾಗಿಲು ಮುಚ್ಚಿ ತನಿಖೆ ಮುಂದುವರಿಸಲಾಗಿದೆ.
ಈ ಹಠಾತ್ ಲೋಕಾಯುಕ್ತ ದಾಳಿಗೆ ನಿಖರವಾದ ಕಾರಣವೇನು, ಯಾವ ದೂರು ಅಥವಾ ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀವ್ರ ತಪಾಸಣೆ ನಡೆಯುತ್ತಿದೆ ಎಂಬ ಕುರಿತು ತನಿಖಾಧಿಕಾರಿಗಳಿಂದ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕಾರ್ಯಾಚರಣೆ ಪೂರ್ಣಗೊಂಡ ಬಳಿಕವಷ್ಟೇ ದಾಳಿಯ ಹಿಂದಿನ ಸಂಪೂರ್ಣ ಸತ್ಯಾಸತ್ಯತೆ ಬಹಿರಂಗವಾಗುವ ನಿರೀಕ್ಷೆಯಿದೆ.
