ದಾಂಡೇಲಿ: ನಗರದ ಐಪಿಎಂ (IPM) ಪ್ರದೇಶದಲ್ಲಿರುವ ಹೋಂ ಸ್ಟೇಯೊಂದರ ಆವರಣದೊಳಗೆ ಶನಿವಾರ ತಡರಾತ್ರಿ ಚಿರತೆಯೊಂದು ನುಗ್ಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಡಿನಿಂದ ನಾಡಿಗೆ ಬರುತ್ತಿರುವ ಚಿರತೆಗಳ ನಿರಂತರ ಓಡಾಟವು ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಜನವಸತಿ ಪ್ರದೇಶಗಳತ್ತ ಮುಖ ಮಾಡಿದ ವನ್ಯಜೀವಿಗಳು
ಶನಿವಾರ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಐಪಿಎಂನ ‘ದಾಂಡೇಲಿ ಜಂಗಲ್ ರೆಸಿಡೆನ್ಸಿ’ ಹಾಗೂ ಸಮೀಪದ ‘ವೈಲ್ಡ್ ಟೈಗರ್ ಕ್ಯಾಂಪ್’ ಹೋಂಸ್ಟೇ ಆವರಣದಲ್ಲಿ ಚಿರತೆ ಓಡಾಡಿದೆ. ಈ ಹಿಂದೆ ಅಂಬೇವಾಡಿ, ಹಸನ್ಮಾಳದಂತಹ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಾಮಾನ್ಯ ಮತ್ತು ಕಪ್ಪು ಚಿರತೆಗಳು ಇದೀಗ ಪಟೇಲ್ ನಗರ, ಸಾಯಿನಗರ, ಮಾರುತಿ ನಗರ, ಗಾಂಧಿನಗರದಂತಹ ಜನವಸತಿ ಪ್ರದೇಶಗಳಿಗೂ ಲಗ್ಗೆ ಇಡುತ್ತಿವೆ. ಇದೀಗ ಐಪಿಎಂ ಪ್ರದೇಶಕ್ಕೂ ಕಾಲಿಟ್ಟಿರುವುದು, ಚಿರತೆಗಳು ನಾಡಿನಲ್ಲೇ ಖಾಯಂ ಆಗಿ ನೆಲೆಸುವ ಲಕ್ಷಣಗಳನ್ನು ತೋರುತ್ತಿವೆ ಎಂಬ ಭಯವನ್ನು ಮೂಡಿಸಿದೆ.
ಬೀದಿನಾಯಿಗಳೇ ಚಿರತೆಗೆ ಆಕರ್ಷಣೆ?
ಈ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಕಳೆದ ಒಂದು-ಎರಡು ವರ್ಷಗಳಿಂದ ಐಪಿಎಂ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ಭಾಗದಲ್ಲಿ ಚಿರತೆಯೊಂದು ರಸ್ತೆ ದಾಟುವ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಭಾಗದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಿರುವುದರಿಂದ, ಅವುಗಳನ್ನು ಬೇಟೆಯಾಡಲು ಚಿರತೆಗಳು ನಾಡಿನತ್ತ ಬರುತ್ತಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಅರಣ್ಯ ಇಲಾಖೆಗೆ ಕ್ರಮ ಕೈಗೊಳ್ಳಲು ಆಗ್ರಹ
ಹೋಂ ಸ್ಟೇಗಳು ಮತ್ತು ವಸತಿ ಪ್ರದೇಶಗಳು ಹೆಚ್ಚಿರುವ ಈ ಭಾಗದಲ್ಲಿ ಚಿರತೆಗಳ ನಿರಂತರ ಓಡಾಟದಿಂದಾಗಿ ರಾತ್ರಿ ವೇಳೆ ಹೊರಬರಲು ಜನ ಬೆಚ್ಚಿಬೀಳುವಂತಾಗಿದೆ. ಅರಣ್ಯ ಇಲಾಖೆಯು ತಕ್ಷಣವೇ ಎಚ್ಚೆತ್ತುಕೊಂಡು ಚಿರತೆಗಳ ಚಲನವಲನದ ಬಗ್ಗೆ ತೀವ್ರ ನಿಗಾ ವಹಿಸಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
