Spread the love

ಸಿದ್ದಾಪುರ: ತಾಲೂಕಿನ ಕವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕುಂಜಿ ಗ್ರಾಮದ ಗೋಳಗೋಡ ಊರಿನಲ್ಲಿ ರಸ್ತೆಯೊಂದು ಸಂಪೂರ್ಣವಾಗಿ ಹದಗೆಟ್ಟಿತ್ತು. ರಸ್ತೆಯೆಲ್ಲಾ ಗುಂಡಿಮಯವಾಗಿದ್ದರಿಂದ ವಾಹನ ಸವಾರರು ಹಾಗೂ ಸ್ಥಳೀಯರು ಪ್ರತಿನಿತ್ಯ ಪರದಾಡುವಂತಾಗಿತ್ತು. ಕಳೆದ ಎರಡು-ಮೂರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದರೂ, ವಿಶೇಷವಾಗಿ ಮಳೆಗಾಲದಲ್ಲಿ ಈ ರಸ್ತೆಯ ದುಸ್ಥಿತಿ ಇನ್ನಷ್ಟು ಭೀಕರವಾಗುತ್ತಿತ್ತು.

ಅಧಿಕಾರಿಗಳಿಗಾಗಿ ಕಾಯದೆ ತಾವೇ ಮುಂದಾದ ಯುವಕರು 

ಸರ್ಕಾರದ ಅನುದಾನ ಬರುತ್ತದೆ, ಅಧಿಕಾರಿಗಳು ರಸ್ತೆ ಸರಿಪಡಿಸುತ್ತಾರೆ ಎಂದು ಕಾದು ಸುಸ್ತಾಗಿದ್ದ ಗೋಳಗೋಡ ಗ್ರಾಮದ ಯುವಕರು, “ನಮ್ಮೂರ ರಸ್ತೆಯನ್ನು ನಾವೇ ದುರಸ್ತಿ ಮಾಡಿಕೊಳ್ಳಬೇಕು, ಮನವಿ ಮಾಡಿದರೆ ಯಾವುದೇ ಪ್ರಯೋಜನವಿಲ್ಲ” ಎಂದು ನಿರ್ಧರಿಸಿದ್ದಾರೆ. ಎಲ್ಲರೂ ಒಗ್ಗೂಡಿ ಶ್ರಮದಾನದ ಮೂಲಕ ರಸ್ತೆಯಲ್ಲಿದ್ದ ಬೃಹತ್ ಗುಂಡಿಗಳಿಗೆ ಕಲ್ಲುಗಳನ್ನು ಜೋಡಿಸಿ, ಮಣ್ಣು ಹಾಕಿ ಸಮತಟ್ಟು ಮಾಡುವ ಮೂಲಕ ವಾಹನ ಸಂಚಾರಕ್ಕೆ ಸುಗಮ ಹಾದಿ ಕಲ್ಪಿಸಿದ್ದಾರೆ.

ಸ್ಥಳೀಯರಿಂದ ವ್ಯಾಪಕ ಮೆಚ್ಚುಗೆ 

ಯಾವುದೇ ಸರ್ಕಾರದ ನೆರವಿಲ್ಲದೆ, ತಮ್ಮ ಊರಿನ ರಸ್ತೆಯನ್ನು ತಾವೇ ದುರಸ್ತಿ ಮಾಡಿಕೊಂಡ ಯುವಕರ ಈ ಒಗ್ಗಟ್ಟು ಮತ್ತು ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಈ ಶ್ರಮದಾನ ಕಾರ್ಯದಲ್ಲಿ ಯುವಕರಾದ ಹೇಮಂತ ನಾಯ್ಕ, ಮೋಹನ ನಾಯ್ಕ, ಸುರೇಶ ನಾಯ್ಕ, ರಾಜಶೇಖರ ನಾಯ್ಕ, ಕಿರಣ ನಾಯ್ಕ, ಕೃಷ್ಣ ನಾಯ್ಕ್, ಪ್ರವೀಣ ನಾಯ್ಕ, ಶ್ರೀಪತಿ ನಾಯ್ಕ್, ಲಕ್ಷ್ಮಣ ನಾಯ್ಕ, ತಿಮ್ಮ ನಾಯ್ಕ ಸೇರಿದಂತೆ ಹಲವರು ಉತ್ಸಾಹದಿಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *