ಭಟ್ಕಳ: ಜಿಲ್ಲೆಯ ಭಟ್ಕಳದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ಗುಳಮಿ ರೈಲ್ವೆ ನಿಲ್ದಾಣ ರಸ್ತೆಯ ಮದರಸಾ ಹಾಗೂ ಮಸೀದಿ ಸಮೀಪ ಕಲ್ಲು ತೂರಾಟ ನಡೆದಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳು ದಾಖಲಾಗಿವೆ.
ಸೆಪ್ಟೆಂಬರ್ 16 ರಂದು ಬುಧವಾರ ರಾತ್ರಿ ತಲಾಂದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗಣೇಶ ವಿಗ್ರಹವನ್ನು ವಿಸರ್ಜನೆಗೆ ಕೊಂಡೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿಯನ್ನು ಹತೋಟಿಗೆ ತಂದಿರುವ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ ತನಿಖೆ ಮುಂದುವರಿಸಿದ್ದಾರೆ.
ಬುಧವಾರ ರಾತ್ರಿ 8.20 ರ ಸುಮಾರಿಗೆ ತಲಾಂದದಿಂದ ಆರಂಭವಾದ ಮೆರವಣಿಗೆಯು ಗುಳಮಿ ರೈಲ್ವೆ ಬ್ರಿಡ್ಜ್ ದಾಟಿ ಸಾಗುತ್ತಿದ್ದಾಗ, 9.45 ರ ಸುಮಾರಿಗೆ ರಸ್ತೆಯ ಪಕ್ಕದಲ್ಲಿರುವ ಇಸ್ಮಾಯಿಲ್ ಸುನ್ನಿ ಜಾಮೀಯಾ ಮಸೀದಿ ಹಾಗೂ ತಾಜುಸುನ್ನಾ ಅರೇಬಿಕ್ ಮದರಸಾದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಲ್ಲು ತೂರಾಟದಿಂದ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ಬಂದರು ರಸ್ತೆ 5 ನೇ ಕ್ರಾಸ್ ನಿವಾಸಿಗಳಾದ ಅಬ್ದುಲ್ ಅಲಿಂ (67) ಹಾಗೂ ಶಾಹುಲ್ ಅಮೀನ್ ಗವಾಯಿ ಅವರು ಮಧ್ಯರಾತ್ರಿ 12.15 ಕ್ಕೆ ದೂರು ದಾಖಲಿಸಿದ್ದಾರೆ.
ಇದರ ಬೆನ್ನಲ್ಲೇ ಗುರುವಾರ ನಸುಕಿನ ಜಾವ 4 ಗಂಟೆಗೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಾಜು ಸಂಕಪ್ಪ ನಾಯ್ಕ ಅವರು ಪ್ರತಿದೂರು ನೀಡಿದ್ದು, ರಾತ್ರಿ 9.30 ರ ವೇಳೆಗೆ ರಾಮಚಂದ್ರ ನಾಯ್ಕ ಅವರಿಗೆ ಸೇರಿದ ಕಟ್ಟಡದ ಮೇಲಿನಿಂದ ಕಿಡಿಗೇಡಿಗಳು ಗಣೇಶ ವಿಗ್ರಹದ ಕಡೆಗೆ ಕಲ್ಲು ತೂರಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕೋಮು ಸಾಮರಸ್ಯ ಕದಡುವ ಯತ್ನ ನಡೆದಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಮಸೀದಿ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಜನರು ರಾತ್ರಿಯೇ ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಜಮಾಯಿಸಿ, ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಪಟ್ಟು ಹಿಡಿದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕೆಲ ಸದಸ್ಯರನ್ನು ಠಾಣೆಗೆ ಕರೆಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೃಷ್ಣಮೂರ್ತಿ, ಎಎಸ್‌ಪಿ ರಾನು ಗುಪ್ತ, ಸಿಪಿಐ ದಿವಾಕರ ಪಿ.ಎಂ ಹಾಗೂ ಪಿಎಸ್‌ಐ ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ಆಧರಿಸಿ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
