ಜೋಯಿಡಾ: ತಾಲೂಕಿನ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ (ಟ್ರಾಫಿಕ್ ಫೈನ್) ನಕಲಿ ಲಿಂಕ್ ಕಳುಹಿಸಿ ಆಂಬ್ಯುಲೆನ್ಸ್ ಚಾಲಕನೊಬ್ಬನಿಂದ ಬರೋಬ್ಬರಿ 2,19,855 ರೂಪಾಯಿಗಳನ್ನು ಎಗರಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ವಿಜಯಪುರ ಮೂಲದವರಾಗಿದ್ದು, ಪ್ರಸ್ತುತ ರಾಮನಗರದ ಕೆಪಿಸಿ ಕಾಲೋನಿಯ ಜಿ.ಪಂ. ವಸತಿಗೃಹದಲ್ಲಿ ವಾಸವಿರುವ 39 ವರ್ಷದ 108 ಆಂಬ್ಯುಲೆನ್ಸ್ ಚಾಲಕ ಸುರೇಶ್ ನರಸಪ್ಪ ಕುಬಕಡ್ಡಿ ಎಂಬುವವರೇ ಸೈಬರ್ ವಂಚಕರ ಬಲೆಗೆ ಬಿದ್ದವರು. ಈ ಸಂಬಂಧ ಅವರು ಸ್ಥಳೀಯ ರಾಮನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ 2023 ರ ಅಡಿ ಪ್ರಕರಣ ದಾಖಲಾಗಿದೆ. ವಂಚಕರಾದ ಅಭಿನಾಶ್ ಬಿ.ಎ ಹಾಗೂ ಅಮನ್ ಕೌರ್ ಕೈನ್ ಎಂಬುವವರ ಖಾತೆಗೆ ಹಣ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸೆಪ್ಟೆಂಬರ್ 11 ರಂದು ಸುರೇಶ್ ಅವರ 108 ಆಂಬ್ಯುಲೆನ್ಸ್ ಮೇಲ್ವಿಚಾರಕರಾದ ಗುರುರಾಜ್ ನಾಯಕ್ ಅವರ ಮೊಬೈಲ್‌ಗೆ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಅದರಲ್ಲಿ ಸುರೇಶ್ ಚಲಾಯಿಸುತ್ತಿದ್ದ ಕೆ.ಎ-51/ಜಿ-0493 ಸಂಖ್ಯೆಯ ಆಂಬ್ಯುಲೆನ್ಸ್ ಸಂಚಾರ ನಿಯಮ ಉಲ್ಲಂಘಿಸಿದ್ದು, ದಂಡ ಪಾವತಿಸುವಂತೆ ಸೂಚಿಸಲಾಗಿತ್ತು. ಮೇಲ್ವಿಚಾರಕರು ಆ ಮೆಸೇಜ್ ಅನ್ನು ಸುರೇಶ್ ಅವರಿಗೆ ಫಾರ್ವರ್ಡ್ ಮಾಡಿ ಪರಿಶೀಲಿಸುವಂತೆ ತಿಳಿಸಿದ್ದರು.
ದಂಡ ಪಾವತಿಸಲು ಸಂದೇಶದಲ್ಲಿದ್ದ ನಕಲಿ ಲಿಂಕ್ ಅನ್ನು ಸುರೇಶ್ ಕ್ಲಿಕ್ ಮಾಡಿದಾಗ, ಅದು ಕ್ರೋಮ್ ಬ್ರೌಸರ್ ಮೂಲಕ ಓಪನ್ ಆಗಿ ‘NexGen mParivahan’ ಎಂಬ ಹೆಸರಿನ ನಕಲಿ ಅಪ್ಲಿಕೇಶನ್ ಒಂದು ಮೊಬೈಲ್‌ಗೆ ಡೌನ್‌ಲೋಡ್ ಆಗಿದೆ. ಆ ಅಪ್ಲಿಕೇಶನ್ ಅನ್ನು ಓಪನ್ ಮಾಡಿದಾಗ ಅದರಲ್ಲಿ ಯಾವುದೇ ಮಾಹಿತಿಯೂ ಲಭ್ಯವಾಗಿರಲಿಲ್ಲ. ಅಂದು ತಾವು ಬೆಳಗಾವಿಗೆ ತೆರಳಿದ್ದಾಗ ಅಲ್ಲಿನ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ, ತಮ್ಮ ವಾಹನದ ಮೇಲೆ ಯಾವುದೇ ದಂಡವಿಲ್ಲ ಎಂಬುದು ಸುರೇಶ್ ಅವರಿಗೆ ಖಚಿತವಾಗಿತ್ತು. ಇದು ಸೈಬರ್ ವಂಚಕರ ಲಿಂಕ್ ಆಗಿರಬಹುದು ಎಂದು ಪೊಲೀಸರು ಎಚ್ಚರಿಸಿದ ತಕ್ಷಣವೇ ಅವರು ಆ ಅಪ್ಲಿಕೇಶನ್ ಅನ್ನು ಮೊಬೈಲ್‌ನಿಂದ ಡಿಲೀಟ್ ಮಾಡಿದ್ದರು.
ಆದರೆ, ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಆದಾಗಲೇ ವಂಚಕರು ಸುರೇಶ್ ಅವರ ಮೊಬೈಲ್‌ನ ನಿಯಂತ್ರಣ ಸಾಧಿಸಿ ಡೇಟಾವನ್ನು ಕದ್ದಿದ್ದರು. ಸೆಪ್ಟೆಂಬರ್ 14 ರಂದು ಸಂಜೆ 17:21 ರಿಂದ 17:27 ರ ಅವಧಿಯಲ್ಲಿ ಸುರೇಶ್ ಅವರ ಎರಡು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಿಂದ ತಲಾ 49,000 ರೂಪಾಯಿ ಹಾಗೂ 72,000 ರೂಪಾಯಿ ಹಣ ಅಭಿನಾಶ್ ಬಿ.ಎ ಎಂಬಾತನ ಖಾತೆಗೆ ವರ್ಗಾವಣೆಯಾಗಿದೆ.
ಈ ಬಗ್ಗೆ ಅನುಮಾನಗೊಂಡು ಅವರು ತಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪರಿಶೀಲಿಸಿದಾಗ, ಅದರಿಂದಲೂ 98,855 ರೂಪಾಯಿ ಹಣ ಅಮನ್ ಕೌರ್ ಕೈನ್ ಎಂಬುವವರ ಖಾತೆಗೆ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಕೇವಲ ಕೆಲವೇ ನಿಮಿಷಗಳಲ್ಲಿ ಒಟ್ಟು 2,19,855 ರೂಪಾಯಿಗಳನ್ನು ಕಳೆದುಕೊಂಡ ಸುರೇಶ್, ತಕ್ಷಣವೇ ಕಸ್ಟಮರ್ ಕೇರ್‌ಗೆ ಕರೆ ಮಾಡಿ ತಮ್ಮ ಮೂರೂ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿದ್ದಾರೆ.
ಬಳಿಕ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದು, ಇದೀಗ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಾಟ್ಸಾಪ್ ಅಥವಾ ಎಸ್‌ಎಂಎಸ್ ಮೂಲಕ ಬರುವ ಯಾವುದೇ ಅಪರಿಚಿತ ದಂಡ ಪಾವತಿಯ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
