Spread the love

ಕಾರವಾರ: ಕಾರವಾರದ ಭಾರತೀಯ ತಟ ರಕ್ಷಕ ಪಡೆಯಲ್ಲಿ 20 ವರ್ಷಗಳ ಕಾಲ ದೇಶದ ಸಮುದ್ರ ಗಡಿ ಕಾವಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐತಿಹಾಸಿಕ ‘ಸಾವಿತ್ರಿಬಾಯಿ ಫುಲೆ’ ಹಡಗಿಗೆ ಕಾರವಾರ ಬಂದರಿನ ಕೋಸ್ಟ್ ಗಾರ್ಡ್ ಜೆಟ್ಟಿಯಲ್ಲಿ ಶನಿವಾರ ಸಂಜೆ ಗೌರವಯುತ ವಿದಾಯ ನೀಡಲಾಯಿತು. 

ಸೂರ್ಯಾಸ್ತದ ಬಳಿಕ ನಡೆದ ವಿಶೇಷ ಸಮಾರಂಭದಲ್ಲಿ ನೌಕೆಯ ಮೇಲಿದ್ದ ಕೋಸ್ಟ್ ಗಾರ್ಡ್ ಧ್ವಜ ಹಾಗೂ ರಾಷ್ಟ್ರಧ್ವಜವನ್ನು ಕೊನೆಯ ಬಾರಿಗೆ ಗೌರವಪೂರ್ವಕವಾಗಿ ಕೆಳಗಿಳಿಸುವ ಮೂಲಕ ನೌಕೆಯ ಸುದೀರ್ಘ ಸೇವಾ ಅವಧಿಗೆ ಅಧಿಕೃತ ತೆರೆ ಎಳೆಯಲಾಯಿತು. ಧ್ವಜ ಇಳಿಸಿದ ಬಳಿಕ ನೌಕೆಯ ಉದ್ದಕ್ಕೆ ಸಮನಾದ ವಿಶೇಷ ‘ಪೇಯಿಂಗ್ ಆಫ್ ಪೆನ್ನಂಟ್’ ಅನ್ನು ಕೆಳಗಿಳಿಸುವ ಮೂಲಕ ನೌಕೆಯ ಸೇವಾ ನಿವೃತ್ತಿಯನ್ನು (ಡಿ-ಕಮಿಷನ್) ಘೋಷಿಸಲಾಯಿತು ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೋಸ್ಟ್ ಗಾರ್ಡ್ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ, ಸಾವಿತ್ರಿಬಾಯಿ ಫುಲೆ ಹಡಗು ಕೇವಲ ಉಕ್ಕು ಮತ್ತು ಯಂತ್ರಗಳಿಂದ ಮಾಡಲ್ಪಟ್ಟಿದ್ದಲ್ಲ, ಬದಲಾಗಿ ಕಮಾಂಡರ್‌ಗಳು ಹಾಗೂ ಸಿಬ್ಬಂದಿಯ ಶ್ರಮದಿಂದ ಜೀವಂತವಾಗಿತ್ತು ಎಂದು ಬಣ್ಣಿಸಿದರು. 

2 ದಶಕಗಳ ಕಾಲ ಈ ಹಡಗು ಕಠಿಣ ಹವಾಮಾನ, ಮಳೆ ಮತ್ತು ಬಿರುಗಾಳಿಯ ನಡುವೆಯೂ ಗಸ್ತು ತಿರುಗಿ ಭಾರತದ ಸಮುದ್ರ ಗಡಿಗಳನ್ನು ಕಾಯುವಲ್ಲಿ ನಿರಂತರ ಸೇವೆ ಸಲ್ಲಿಸಿದೆ. ಸಮುದ್ರದಲ್ಲಿ ಆಪತ್ತಿನಲ್ಲಿರುವ ಮೀನುಗಾರರು ಮತ್ತು ನಾವಿಕರಿಗೆ ಆಶಾಕಿರಣವಾಗಿದ್ದ ಈ ಹಡಗು, ದೇಶದ ಭದ್ರತೆಗೆ ಸವಾಲು ಒಡ್ಡಲು ಯತ್ನಿಸುವ ದುಷ್ಟ ಶಕ್ತಿಗಳಿಗೆ ಕಟ್ಟುನಿಟ್ಟಿನ ಪ್ರತ್ಯುತ್ತರದ ಸಂಕೇತವಾಗಿತ್ತು. ಕರಾವಳಿ ಕಾವಲು ಪಡೆಯ ಇತಿಹಾಸದಲ್ಲಿ ಇದರ ಕೊಡುಗೆ ಹಾಗೂ ಪರಂಪರೆ ಎಂದಿಗೂ ಅಮರವಾಗಿರುತ್ತದೆ ಎಂದು ಶ್ಲಾಘಿಸಿದರು.

ಸಾವಿತ್ರಿಬಾಯಿ ಫುಲೆ ಹಡಗಿನ ಕಮಾಂಡಿಂಗ್ ಆಫೀಸರ್ ಕಮಾಂಡೆಂಟ್ ಗೌರವ್ ಶ್ರೀವಾಸ್ತವ್ ಅವರು ಹಡಗಿನ ಸಾಧನೆಗಳನ್ನು ಮೆಲುಕು ಹಾಕಿದರು. 2006 ರ ಅಕ್ಟೋಬರ್ 28 ರಂದು ಸೇವೆಗೆ ಸೇರ್ಪಡೆಗೊಂಡಿದ್ದ ಈ ಹಡಗು, ಸಮುದ್ರದಲ್ಲಿ ಸುಮಾರು 78468 ನಾಟಿಕಲ್ ಮೈಲಿಗಳಷ್ಟು ಗಸ್ತು ನಡೆಸಿದೆ. ಒಟ್ಟು 14 ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಗಳು ಮತ್ತು 4 ವೈದ್ಯಕೀಯ ತೆರವು ಕಾರ್ಯಾಚರಣೆಗಳನ್ನು ಕೈಗೊಂಡು 71 ಪ್ರಾಣಗಳನ್ನು ರಕ್ಷಿಸಿದೆ. 

2 ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ನೌಕೆಯು, 2006-07, 2010-11 ಹಾಗೂ 2014 ರಲ್ಲಿ ಅತ್ಯುತ್ತಮ ‘ಸರ್ಚ್ ಅಂಡ್ ರೆಸ್ಕ್ಯೂ ಯೂನಿಟ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಗೋವಾ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ಸ್ವದೇಶಿಯಾಗಿ ನಿರ್ಮಿಸಲ್ಪಟ್ಟಿದ್ದ ಈ ಹಡಗು ಆತ್ಮನಿರ್ಭರತೆಗೆ ಸಾಕ್ಷಿಯಾಗಿತ್ತು. 

ಕಾರ್ಯಕ್ರಮದಲ್ಲಿ ಕೋಸ್ಟ್ ಗಾರ್ಡ್ ಕಾರವಾರದ ಕಮಾಂಡರ್ ಅಖಿಲ್ ಯಾದವ್, ಡಿಎಫ್‌ಓ ಆಂತೋಣಿ ಮರಿಯಪ್ಪ, ಸಿಐಎಸ್ಎಫ್ ಕೈಗಾದ ಕಮಾಂಡಿಂಗ್ ಆಫೀಸರ್ ಅಜಯ್ ಕುಮಾರ್ ಝಾ, ನಿವೃತ್ತ ಡಿಐಜಿ ಮನೋಜ್ ಬಾಡ್ಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *