ಭಟ್ಕಳ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟದ ಘಟನೆ ನಡೆದಿರುವ ಬೆನ್ನಲ್ಲೇ ಭಟ್ಕಳದಲ್ಲಿ ಗಣೇಶೋತ್ಸವದ ಪೆಂಡಾಲ್ ಮೇಲೆ ಕಲ್ಲು ತೂರಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ತಾಲೂಕಾ ರಿಕ್ಷಾ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ದೂರು ಸಲ್ಲಿಸಲಾಗಿದ್ದು, ಎಸ್ಪಿ ದಿಲೀಪನ್ ಅವರಿಗೂ ಮನವಿ ನೀಡಲಾಗಿದೆ.
ಭಟ್ಕಳದ ಹಳೆ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಸರ್ವೆ ನಂಬರ್ 573ಬಿಯ ಸುಮಾರು 10 ಗುಂಟೆ ಜಾಗದಲ್ಲಿ ಕಳೆದ 43 ವರ್ಷಗಳಿಂದ ರಿಕ್ಷಾ ಚಾಲಕರ-ಮಾಲಕರ ಸಂಘದ ವತಿಯಿಂದ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಸೆಪ್ಟೆಂಬರ್ 18 ರಂದು ಸಂಜೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಆಯೋಜಿಸಲಾಗಿದೆ.
ದೂರಿನಲ್ಲಿ ತಿಳಿಸಿರುವಂತೆ, ಶುಕ್ರವಾರ ಬೆಳಗ್ಗೆ ಸುಮಾರು 7.20ರ ವೇಳೆಗೆ ಅಂಜುಮನ್ ಶಾಲೆಯ ಮೈದಾನದ ಕಡೆಯಿಂದ ಯಾರೋ ಕಿಡಿಗೇಡಿಗಳು ಗಣೇಶೋತ್ಸವದ ಮೇಲ್ಛಾವಣಿಯ ತಗಡಿನ ಶೀಟ್ ಮೇಲೆ 3-4 ಕಲ್ಲುಗಳನ್ನು ಎಸೆದಿದ್ದಾರೆ. ಕಲ್ಲುಗಳು ಮೇಲ್ಛಾವಣಿಗೆ ಬಿದ್ದು ಕೆಳಗೆ ಬಂದಿದ್ದು, ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಲಾಗಿದೆ. ಕಲ್ಲು ತೂರಾಟ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಆಟೋ ಚಾಲಕರು ಹಾಗೂ ಗಣೇಶೋತ್ಸವ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯಿಂದ ಗಣೇಶೋತ್ಸವ ಆಯೋಜಕರಲ್ಲಿ ಬೇಸರ ಉಂಟಾಗಿದ್ದು, ಕಲ್ಲು ಎಸೆದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಇದೇ ವೇಳೆ ಶುಕ್ರವಾರ ಸಂಜೆ 6.30ಕ್ಕೆ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿರುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಕೋರಲಾಗಿದೆ.
ಮೆರವಣಿಗೆ ಸಾಗುವ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಿ, ಮೆರವಣಿಗೆ ಸುಗಮವಾಗಿ ಸಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಭಟ್ಕಳ ತಾಲೂಕಾ ರಿಕ್ಷಾ ಚಾಲಕರ-ಮಾಲಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗಣಪತಿ ನಾಯ್ಕ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
