ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಐಆರ್‌ಬಿ ಹೈವೇ ಪ್ಯಾಟ್ರೋಲಿಂಗ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಬೆಳಗಿನ ಜಾವ ತಾಲೂಕಿನ ಕಾಸರಕೋಡ ಬಳಿ ನಡೆದಿದೆ.
ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಐಆರ್‌ಬಿ ಪ್ಯಾಟ್ರೋಲಿಂಗ್‌ನ ಬುಲೆರೋ ಪಿಕಪ್ ವಾಹನ ಭಟ್ಕಳದಿಂದ ಹೊನ್ನಾವರದತ್ತ ತೆರಳುತ್ತಿತ್ತು. ಕಾಸರಕೋಡ ಸಮೀಪ ಹೆದ್ದಾರಿಯ ಎಡಭಾಗದಲ್ಲಿ ಕ್ಯಾಂಟರ್ ವಾಹನವೊಂದು ನಿಂತಿತ್ತು.
ಪ್ಯಾಟ್ರೋಲಿಂಗ್ ವಾಹನದ ಚಾಲಕನಿಗೆ ನಿಂತಿದ್ದ ಕ್ಯಾಂಟರ್ ಗಮನಕ್ಕೆ ಬಂದಿರಲಿಲ್ಲ. ವಾಹನವು ಕ್ಯಾಂಟರ್‌ಗೆ ಸಮೀಪಿಸಿದಾಗ ಅದನ್ನು ಗಮನಿಸಿದ ಚಾಲಕ ಏಕಾಏಕಿ ಬಲಕ್ಕೆ ತಿರುಗಿಸಲು ಪ್ರಯತ್ನಿಸಿದ್ದು, ಈ ವೇಳೆ ಪ್ಯಾಟ್ರೋಲಿಂಗ್ ವಾಹನ ಕ್ಯಾಂಟರ್‌ನ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಐಆರ್‌ಬಿಯ ಬುಲೆರೋ ವಾಹನದ ಎಡಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ವಾಹನದ ಚಾಲಕ ಹಾಗೂ ಎಡಭಾಗದಲ್ಲಿ ಕುಳಿತಿದ್ದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಅಂಬ್ಯುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ರಮ ಮರಳು ಸಾಗಾಟದ ಆರೋಪ
ಹೆದ್ದಾರಿಯಲ್ಲಿ ನಿಂತಿದ್ದ ಕ್ಯಾಂಟರ್ ಅಕ್ರಮ ಮರಳು ಸಾಗಾಟಕ್ಕಾಗಿ ನಿಂತಿತ್ತು ಎನ್ನುವ ಆರೋಪಗಳು ಕೇಳಿಬಂದಿವೆ. ಕ್ಯಾಂಟರ್‌ನಲ್ಲಿದ್ದ ಮೂವರ ಪೈಕಿ ಓರ್ವ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಾಸರಕೋಡ ಭಾಗದಲ್ಲಿ ಅನುಮತಿಯಿಲ್ಲದೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಆರೋಪಗಳು ಈ ಹಿಂದೆಯೂ ಕೇಳಿಬಂದಿದ್ದು, ಹೆದ್ದಾರಿಯಲ್ಲಿ ಮರಳು ಸಾಗಾಟದ ವಾಹನಗಳು ನಿಲ್ಲುತ್ತಿರುವುದರಿಂದ ಅಪಘಾತದಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕ್ಯಾಂಟರ್ ಹೆದ್ದಾರಿಯಲ್ಲಿ ನಿಂತಿದ್ದ ಕಾರಣ ಹಾಗೂ ಅಕ್ರಮ ಮರಳು ಸಾಗಾಟದ ಆರೋಪದ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಹೆದ್ದಾರಿಯಲ್ಲಿ ಇಂತಹ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ಎದುರಾಗುತ್ತಿರುವ ಅಪಾಯವನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
