ಕುಮಟಾ: ಜಿಲ್ಲೆಯ ಅಂಕೋಲಾ–ಕುಮಟಾ ತಾಲೂಕಿನ ಗಡಿಭಾಗದಲ್ಲಿರುವ ಗಂಗಾವಳಿ ಸೇತುವೆಯ ತಳಭಾಗದಲ್ಲಿ ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಶುಕ್ರವಾರ ಮುಂಜಾನೆ ಸುಮಾರು 6.30ರ ವೇಳೆಗೆ ಗಂಗಾವಳಿ ಸೇತುವೆಯ ಕೆಳಭಾಗದಲ್ಲಿ ನದಿ ದಡಕ್ಕೆ ಮೃತದೇಹವೊಂದು ತೇಲಿ ಬಂದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವು ಸುಮಾರು 35 ವರ್ಷ ವಯಸ್ಸಿನ ಪುರುಷನದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಮೃತನ ಕತ್ತಿನಲ್ಲಿ ಆಂಜನೇಯನ ಲಾಕೆಟ್ ಹಾಗೂ ಕೈಗೆ ಕಪ್ಪು ದಾರ ಕಟ್ಟಲಾಗಿದೆ. ಆದರೆ, ಈವರೆಗೆ ವ್ಯಕ್ತಿಯ ನಿಖರ ಗುರುತು ಪತ್ತೆಯಾಗಿಲ್ಲ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಪರಿಶೀಲಿಸಿ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತದೇಹವು ನದಿಯಲ್ಲಿ ತೇಲಿ ಬಂದಿರುವ ಹಿನ್ನೆಲೆಯಲ್ಲಿ, ನೀರಿನಲ್ಲಿ ಕೊಚ್ಚಿಕೊಂಡು ಬಂದಿರಬಹುದೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ವ್ಯಕ್ತಿಯ ಗುರುತು ಪತ್ತೆಹಚ್ಚುವ ಉದ್ದೇಶದಿಂದ, ಸುತ್ತಮುತ್ತಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
